

ಹುಬ್ಬಳ್ಳಿ: ವೃತ್ತಿಪರ ಶಿಕ್ಷಣದಲ್ಲಿ ಮೇಲ್ಪಂಕ್ತಿಯಲ್ಲಿರುವ ಎಂಬಿಎ ಕೋರ್ಸ್ ಕಲಿಯುವವರಿಗಾಗಿ ಉತ್ತಮ ಗುಣಮಟ್ಟದ ತರಬೇತಿಯುಕ್ತ ಶಿಕ್ಷಣ ನೀಡುವ ಉದ್ದೇಶದಿಂದ ನಗರದ ಗೋಕುಲ ರಸ್ತೆ ಅಕ್ಷಯ ಪಾರ್ಕ್ ಬಳಿ ಬೆಟ್ ಬಿಜನೆಸ್ ಸ್ಕೂಲ್ ಆರಂಭಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಪ್ರಸಾದ ರೂಡಗಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯೋದ್ಯಮಗಳನ್ನು ಮುನ್ನಡೆಸುವ ಕೌಶಲ ಹೊಂದಿರುವ ಯುವಕರಿಗೆ ವಿವಿಧ ಬಹುರಾಷ್ಟ್ರೀಯ ಕಂಪನಿಗಳು, ದೇಶಿಯ ಸಂಸ್ಥೆಗಳಲ್ಲಿ ಬಹಳ ಬೇಡಿಕೆ ಇದೆ. ಹಾಗಾಗಿ ಸುಸ್ಥಿರ, ಸಮಗ್ರ ಅಧ್ಯಯನ ಮಾಡಿರುವ ಅಭ್ಯಥಿರ್ಗಳಿಗಾಗಿ ನೇಮಕಾತಿ ಸಂದರ್ಭದಲ್ಲಿ ಉದ್ಯೋಗದಾತರು ಹುಡುಕಾಡುತ್ತಾರೆ.
ಅಂತಹ ಕೌಶಲವುಳ್ಳ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಎಂಬಿಎ ಕಾಲೇಜು ಆರಂಭಿಸಲಾಗಿದೆ ಎಂದರು.
ಬ್ರೈಟ್ ಶಿಕ್ಷಣ ಪ್ರತಿಷ್ಠಾನದ ಅಡಿ ಬ್ರೈಟ್ ಬಿಜನೆಸ್ ಸ್ಕೂಲ್ (ಬಿಬಿಎಸ್) ಆರಂಭಿಸಲಾಗುತ್ತಿದೆ. ವಿಶಿಷ್ಟ ಬೋಧನೆ, ಪ್ರಾಯೋಗಿಕ ಹಾಗೂ ಅನುಭವ ಆಧಾರಿತ ಶಿಕ್ಷಣ ನೀಡುವ ಸಲುವಾಗಿ ಸಮಾನ ಮನಸ್ಕರು ಸೇರಿ ಪ್ರತಿಷ್ಠಾನ ಸ್ಥಾಪನೆ ಮಾಡಲಾಗಿದೆ.
ಇಂದಿನ ಮಾರುಕಟ್ಟೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದು, ಅವರು ಉದ್ಯೋಗ ಪಡೆಯಲು ನೆರವಾಗುವುದು ಸಂಸ್ಥೆಯ ಮೂಲ ಗುರಿ ಎಂದು ಹೇಳಿದರು.
ಬಹಳಷ್ಟು ಎಂಬಿಎ ಕಾಲೇಜುಗಳು ಇದ್ದರೂ ಕೂಡ ಮಾರುಕಟ್ಟೆಗೆ ಬೇಕಾದ ಕೌಶಲ ಅನೇಕ ಕಂಪನಿಗಳಿಗೆ ಸಿಗುತ್ತಿಲ್ಲ. ಅನುಭವ ಆಧಾರಿತ ಕಲಿಕೆಗೆ ಅವಕಾಶಗಳು ಕಡಿಮೆಯಾದಂತೆ ಕಾಣಿಸುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಕೊರತೆಗಳನ್ನು ನೀಗಿಸಿ ವಿನೂತನ ಮಾದರಿಯಲ್ಲಿ ಮ್ಯಾನೇಜಮೆಂಟ್ ಶಿಕ್ಷಣವನ್ನು ನೀಡಬೇಕೆಂಬ ಸದುದ್ದೇಶದಿಂದ 20ಕ್ಕೂ ಹೆಚ್ಚು ವರ್ಷಗಳ ತಮ್ಮ ಅನುಭವ ಬಳಸಿಕೊಂಡು ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡು ಬಿ. ಸ್ಕೂಲ್ ಆರಂಭಿಸಿದ್ದೇವೆ ಎಂದು ಡಾ. ರೂಡಗಿ ತಿಳಿಸಿದರು.
ಕೈಗೆಟುಕುವ ಶುಲ್ಕ, ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ಸಹಾಯ, ಪೌಷ್ಟಿಕ ಆಹಾರದ ವ್ಯವಸ್ಥೆ, ಕಾರ್ಪೋರೇಟ್ ಮೌಲ್ಯಗಳ ಬೇಡಿಕೆಗಳಿಗೆ ಅನುಗುಣವಾಗಿ ಪಠ್ಯಕ್ರಮದ ವಿನ್ಯಾಸ, ಬೋಧನೆ,
ಔದ್ಯಮಿಕ ತಜ್ಞರು, ಉದ್ಯಮಪತಿಗಳೊಂದಿಗೆ ನೇರ ಸಂವಾದ, ಹೀಗೆ ಹಲವು ವೈಶಿಷ್ಟ್ಯಗಳನ್ನು ಸ್ಕೂಲ್ ಹೊಂದಿರಲಿದೆ. ಹಾಗಾಗಿ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿ ಕಲಿಕಾ ವಾತಾವರಣ ಇರಲಿದೆ ಎಂದು ಹೇಳಿದರು.
ಬೆಸ್ಟ್ ಪರೀಕ್ಷೆ:
ಬೆಟ್ ಎಂಟ್ರೆನ್ಸ್ ಹಾಗೂ ಸ್ಕಾಲರ್ಶಿಪ್ ಟೆಸ್ಟ್ (ಬೆಸ್ಟ್) ಅನ್ನು ಸೆ. 10ರಂದು ಬೆಳಗ್ಗೆ 11ಕ್ಕೆ ಬ್ರೈಟ್ ಬಿಜನೆಸ್ ಸ್ಕೂಲ್ ನಲ್ಲಿ ಏರ್ಪಡಿಸಲಾಗಿದೆ.
ಸೆ. 12ರಂದು ಕಾರವಾರದ ದಿವೇಕರ ಕಾಲೇಜು, ಸೆ. 17ರಂದು ವಿಜಯಪುರದ ದರ್ಬಾರ ಡಿಗ್ರಿ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಪ್ರೊ. ಜಿ.ಬಿ. ಹಳ್ಯಾಳ, ಬಸವರಾಜ ಲಿಂಗಶೆಟ್ಟರ್, ಅನಿಲ ಲಿಂಗಶೆಟ್ಟಿ, ಡಾ. ಬಿ.ಎಸ್. ಮಾಳವಾಡ, ಗೋಷ್ಠಿಯಲ್ಲಿದ್ದರು.