

ವಿಜಯಪುರ: ಭಾರತೀಯ ತತ್ವ ಶಾಸ್ತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ನಡೆದಾಡುವ ದೇವರು ಲಿಂ. ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ತತ್ವ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ವಿಪ ಮಾಜಿ ಸದಸ್ಯ ಅರುಣ ಶಹಾಪುರ ಒತ್ತಾಯಿಸಿದರು.
ಲಿಂ. ಸಿದ್ಧೇಶ್ವರ ಶ್ರೀಗಳು ಮಹಾನ್ ಮಹಾನ್ ತತ್ವಜ್ಞಾನಿಗಳು. ನಾವಿಂದು ತತ್ವಜ್ಞಾನಿಗಳು ಎಂದರೆ ಕೇವಲ ಪ್ಲೇಟೊ, ಅರಿಸ್ಟಾಟಲ್, ಸಾಕ್ರೆಟಿಸ್ ಹೆಸರು ಹೇಳುತ್ತೇವೆ. ಆದರೆ, ಸಿದ್ಧೇಶ್ವರ ಶ್ರೀಗಳು ಅವರಿಗಿಂತ ಮುಂಚೂಣಿಯಲ್ಲಿರುವ ತತ್ವಜ್ಞಾನಿಗಳು. ಹೀಗಾಗಿ ಅವರ ತತ್ವ, ವಿಚಾರಗಳನ್ನು ಪರಿಚಯಿಸಲು ಈ ಭಾಗದಲ್ಲೊಂದು ತತ್ವಶಾಸ್ತ್ರ ಅಧ್ಯಯನ ಕೇಂದ್ರ ಸ್ಥಾಪಿಸಬೇಕೆಂಬುದು ನನ್ನ ಬಹುದಿನದ ಬಯಕೆ. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದಲ್ಲದೇ ಬರುವ ಬಜೆಟ್‌ನಲ್ಲಿ ಘೋಷಿಸುವಂತೆ ಒತ್ತಾಯಿಸಲಾಗುವುದೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಿಲ್ಲೆಗೊಂದು ಪ್ರತ್ಯೇಕ ವಿವಿ ಸ್ಥಾಪನೆ ಯೋಜನೆಯಡಿ ವಿಜಯಪುರದಲ್ಲೊಂದು ನೂತನ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು. ಬಿಜೆಪಿ ಸರ್ಕಾರದಲ್ಲಿ ಬಾಗಲಕೋಟೆಯಲ್ಲಿ ಸ್ಥಾಪಿಸಬೇಕಿದ್ದ ವಿಶ್ವ ವಿದ್ಯಾಲಯ ಜಮಖಂಡಿಯಲ್ಲಿ ಸ್ಥಾಪಿತವಾಯಿತು. ಆದರೆ, ವಿಜಯಪುರ ಜಿಲ್ಲೆಯನ್ನು ಹತ್ತಿರದಲ್ಲೇ ಇರುವ ಜಮಖಂಡಿ ನೂತನ ವಿವಿ ವ್ಯಾಪ್ತಿಗೆ ಸೇರ್ಪಡೆ ಮಾಡದೇ ದೂರದ ಬೆಳಗಾವಿಯ ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯಲ್ಲೇ ಮುಂದುವರಿಸಲಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಜಿಲ್ಲೆಗೊಂದು ಪ್ರತ್ಯೇಕ ವಿವಿ ಸ್ಥಾಪಿಸಬೇಕೆಂದು ಶಹಾಪುರ ಒತ್ತಾಯಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಉದ್ಘಾಟಿಸಿದರೆಂಬ ಭಾವನಾತ್ಮಕ ವಿಷಯ ಇರಿಸಿಕೊಂಡು ಅಕ್ಕಮಹಾದೇವಿ ಮಹಿಳಾ ವಿವಿಯನ್ನು ಕೇವಲ ಮಹಿಳೆಯರಿಗೆ ಸೀಮಿತವಾಗಿರಿಸಿಕೊಂಡಿರುವ ಕಾಂಗ್ರೆಸ್ ಆ ವಿವಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಈವರೆಗೂ ಸಿಬ್ಬಂದಿ ನೇಮಕವಾಗಿಲ್ಲ. ತಾತ್ಕಾಲಿಕ ಹುದ್ದೆಯಲ್ಲಿ ಇರುವವರೇ ನಿವೃತ್ತಿಯಾಗುತ್ತಿದ್ದಾರೆಂದು ಶಹಾಪುರ ಲೇವಡಿ ಮಾಡಿದರು.
ಈ ಜಿಲ್ಲೆಯ ಸಚಿವ ಎಂ.ಬಿ. ಪಾಟೀಲ ಅವರೇ ಮಹಿಳಾ ವಿವಿಯನ್ನು ತೆಗೆಯಲು ಬಿಡಲ್ಲ ಎಂದಿದ್ದಾರೆ. ಬಿಡಬೇಡಿ ಆದರೆ ಬೆಳೆಸಿ, ಅನುದಾನ ಕೊಡಿ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ. ಕಾಯಕಲ್ಪ ಒದಗಿಸಿ. ಕನಿಷ್ಠ 100 ಕೋಟಿ ಅನುದಾನ ಕೊಡಿ ಎಂದರು.
ಅವಕಾಶ ಸಿಕ್ಕರೆ ಎಂ.ಬಿ. ಪಾಟೀಲ ಸಿಎಂ ಕೂಡ ಆಗಬಹುದು.ಅಷ್ಟು ಬಲಿಷ್ಠ ಇದ್ದಾರೆ. ಹೀಗಾಗಿ ದಯಮಾಡಿ ಕೇಳುತ್ತೇನೆ ಜಿಲ್ಲೆಗೊಂದು ಪ್ರತ್ಯೇಕ ವಿವಿ ಸ್ಥಾಪನೆಯಾಗಬೇಕು. ಬರುವ ಬಜೆಟ್‌ನಲ್ಲಿ ಘೋಷಣೆಯಾಗಲಿ ಎಂದರು.