

ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಹಿರೀಸಾವೆ
ಹೋಬಳಿಯಾದ್ಯಂತ ಕಳೆದ 3-4 ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿರುವ ಪರಿಣಾಮ ಕಟಾವು ಹಂತ ಸಮೀಪಿಸಿರುವ ರಾಗಿ ಬೆಳೆಯು ಕೆಲಕಚ್ಚುತ್ತಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಹೋಬಳಿಯಲ್ಲಿ ಈ ಬಾರಿ 3,900 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬಿತ್ತನೆಗೊಂಡಿರುವ ರಾಗಿ ಬೆಳೆಯು ಈಗಾಗಲೇ ಬಹುತೇಕ ಕಟಾವಿನ ಹಂತದಲ್ಲಿದೆ. ಆದರೆ, ಕಳೆದ 4 ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ಮೋಡಕವಿದ ವಾತಾವರಣ ಸೃಷ್ಟಿಯಾಗಿದೆ.
ಬಹುತೇಕ ಭಾಗದಲ್ಲಿ ರಾಗಿ ಬೆಳೆಯು ಕಟಾವು ಹಂತದಲ್ಲಿದ್ದು, ಸದ್ಯ ಮೋಡ ಕವಿದ ವಾತಾವರಣ ತೆರವುಗೊಂಡು ಬಿಡುವು ನೀಡಿದರೆ ಇನ್ನು 15 ದಿನಗಳಲ್ಲಿ ಕಟಾವು ಕಾರ್ಯದಲ್ಲಿ ತೊಡಗಲು ರೈತರು ಸಿದ್ಧತೆ ಮಾಡಿಕೊಂಡಿದ್ದರು.
ಆದರೆ, ಹೋಬಳಿ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು 3-4 ದಿನಗಳಿಂದ ಜಡಿ(ಸೋನೆಮಳೆ) ಹಿಡಿದಿದೆ. ಗುರುವಾರ ಸಂಜೆ 4 ಗಂಟೆಯಿಂದ ರಾತ್ರಿವರೆಗೂ ಜೋರಾಗಿಯೇ ಸುರಿದ ಮಳೆ ನಂತರವೂ ಕೆಲವೆಡೆ ಜಿಡಿ ಮುಂದುವರಿಯಿತು. ಶನಿವಾರ ಸಂಜೆ 5 ಗಂಟೆಯಿಂದ ರಾತ್ರಿ ಸುಮಾರಿನವರೆಗೂ ಮಳೆ ಸುರಿಯಿತು. ಪರಿಣಾಮ ರಾಗಿತೆನೆ ನೆಲಕಚ್ಚಿದೆ.
ಕಳೆದ 15 ದಿನಗಳ ಹಿಂದೆ ವ್ಯಾಪಕವಾಗಿ ಸುರಿದ ಮಳೆಯ ಪರಿಣಾಮ ಅರ್ಧದಷ್ಟು ರಾಗಿಬೆಳೆ ನೆಲಕ್ಕುರುಳಿತ್ತು. ಮತ್ತೆ ಸುರಿದ ಮಳೆಯಿಂದ ಸಂಪೂರ್ಣ ಫಸಲು ನೆಲಕಚ್ಚಿದಂತಾಗಿದೆ.
ಹೋಬಳಿಯ ಬಹುತೇಕ ಕಡೆ ತಗ್ಗು ಪ್ರದೇಶದ ಕೃಷಿ ಜಮೀನು ಅಕಾಲಿಕ ಮಳೆಯಿಂದ ಜಲಾವೃತಗೊಂಡಿದ್ದು, ಈಗಾಗಲೇ ನೆಲಕ್ಕುರುಳಿರುವ ಬೆಳೆಗಳು ಕೊಳೆಯಲಾರಂಭಿಸಿವೆ. ಅಕಾಲಿಕ ಮಳೆಯಿಂದ ನೆನೆದು ನೆಲಕ್ಕುರುಳಿರುವ ರಾಗಿಹುಲ್ಲು ವಾರಗಟ್ಟಲೆ ಹಾಗೆಯೇ ಉಳಿದರೆ ತಳದಿಂದಲೇ ಹಸಿ ಗೆದ್ದಲು ಹಿಡಿಯುವ ಹಾಗೂ ರಾಗಿ ತೆನೆಯಲ್ಲಿಯೇ ಮೊಳಕೆಯಾಗುವ ಸಾಧ್ಯತೆ ಇದೆ.
ಈ ಬಾರಿ ವಾಡಿಕೆಯಂತೆ ಮಳೆಯಾದ ಕಾರಣ ರಾಗಿ ಬೆಳೆಯು ಉತ್ತಮ ಫಸಲು ನೀಡುವ ನಿರೀಕ್ಷೆ ಮೂಡಿಸಿದ್ದು, ಸದ್ಯ ಕಟಾವಿನ ಹಂತದಲ್ಲಿ ಅಕಾಲಿಕ ಮಳೆಗೆ ತುತ್ತಾಗಿರುವುದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪೂರ್ವ ಮುಂಗಾರಿನಲ್ಲಿ ಮಳೆ ಸರಿಯಾಗಿ ಬೀಳದ ಪರಿಣಾಮ ಮುಂಗಾರಿನ ಹಂಗಾಮಿನಲ್ಲಿ ಹೆಸರು, ಉದ್ದು, ಹಲಸಂದೆ, ಎಳ್ಳು ಸೇರಿದಂತೆ ಯಾವುದೇ ಬೆಳೆಗಳು ರೈತನ ಕೈ ಸೇರಲಿಲ್ಲ. ಆದರೆ, ರಾಗಿ ಬಿತ್ತನೆ ನಂತರ ವಾಡಿಕೆಯ ಮಳೆಯಾಗಿದ್ದು, ರಾಗಿ ಹಾಗೂ ಮುಸುಕಿನ ಜೋಳದ ಬೆಳೆ ನಿರೀಕ್ಷೆ ಮೀರಿದಂತೆ ಬೆಳವಣಿಗೆ ಕಂಡಿದೆ.
ಜಾನುವಾರುಗಳ ಮೇವಿಗೂ ಬಾರದ ಸ್ಥಿತಿ: ಅಕಾಲಿಕ ಮಳೆಯಿಂದ ರಾಗಿ ಬೆಳೆಯು ಪೂರ್ಣ ಪ್ರಮಾಣದಲ್ಲಿ ನೆಲ ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗೆಯೇ ವಾರಗಟ್ಟಲೆ ಅಕಾಲಿಕ ಮಳೆ ಮುಂದುವರಿದರೆ ಫಸಲು ಇರಲಿ, ಜಾನುವಾರುಗಳ ಮೇವಿಗೂ ಬಾರದ ಸ್ಥಿತಿಗೆ ತಲುಪಲಿದೆ ಎಂದು ಹೊನ್ನಶೆಟ್ಟಿಹಳ್ಳಿ ಗ್ರಾಮದ ರೈತ ಮಂಜಣ್ಣ ಆತಂಕ ವ್ಯಕ್ತಪಡಿಸಿದರು.
ಶಾಪವಾದ ಅಕಾಲಿಕ ಮಳೆ: ಕಳೆದ ವರ್ಷ ತಕ್ಕಮಟ್ಟಿಗೆ ಮಳೆಯಾದರೂ ರಾಗಿ ಹಾಗೂ ಹುಲ್ಲು ರೈತನ ಕೈ ಸೇರಿತ್ತು. ಆದರೆ, ಈ ಬಾರಿ ನಿರೀಕ್ಷೆ ಮೀರಿದಂತೆ ಮಳೆಯಾದ ಕಾರಣ ಉತ್ತಮ ಬೆಳವಣಿಗೆಯೊಂದಿಗೆ ಫಸಲು ಹಿಡಿದಿರುವ ರಾಗಿ ಬೆಳೆ ಅಂತಿಮ ವೇಳೆಯಲ್ಲಿ ನೆಲಕಚ್ಚುತ್ತಿರುವುದು ರೈತನನ್ನು ಚಿಂತೆಗೀಡುಮಾಡುತ್ತಿದೆ.
ಕೂಲಿ ಕಾರ್ಮಿಕರ ಕೊರತೆ: ಸದ್ಯದ ಪರಿಸ್ಥಿತಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಸಾಕಷ್ಟಿದೆ. ಕಟಾವು, ಇತರ ಕೆಲಸ-ಕಾರ್ಯಗಳಿಗೆ ಕಾರ್ಮಿಕರನ್ನು ಕರೆತರವುದೇ ಕಷ್ಟದ ಸಂಗತಿಯಾಗಿದೆ. ರಾಗಿಬೆಳೆ ಉತ್ತಮವಾಗಿದ್ದರೂ, ಸಹ ಕಾರ್ಮಿಕರು ಕಟಾವು ಕಾರ್ಯಕ್ಕೆ ಬರುವುದು ಕಷ್ಟ. ಇನ್ನೂ ನೆಲದ ಮೇಲೆ ಬಿದ್ದಿರುವ ರಾಗಿ ಕಟಾವಿಗೆ ಕಾರ್ಮಿಕರು ಹಿಂದೇಟು ಹಾಕುತ್ತಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೃಷಿ ಜಮೀನುಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದ ಉಂಟಾಗಿರುವ ರಾಗಿಬೆಳೆಯ ಸ್ಥಿತಿ-ಗತಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.