

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಾದೂರು ಐಎಸ್ಪಿಆರ್ಎಲ್ ಯೋಜನಾ ವ್ಯಾಪ್ತಿಯಲ್ಲಿ ಜಲ್ಲಿ ಕ್ರಷರ್ ನಿರ್ಮಾಣ ಕುರಿತಂತೆ ನ.17ರಂದು ವಿಶೇಷ ಗ್ರಾಮ ಸಭೆ ಕರೆಯಲಾಗಿದೆ ಎಂದು ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ತಿಳಿಸಿದರು.
ಮಜೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಮಜೂರು ಗ್ರಾಪಂನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಜಲ್ಲಿ ಕ್ರಷರ್ ನಿರ್ಮಾಣ ಕುರಿತ ಗ್ರಾಪಂನ ನಿಲುವಿನ ಬಗ್ಗೆ ಗ್ರಾಮಸ್ಥರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಕಾಪು ಪುರಸಭೆ ಮತ್ತು ಮಜೂರು ಗ್ರಾಪಂ ವ್ಯಾಪ್ತಿಗೊಳಪಡುವ ಗ್ರಾಮೀಣ ರಸ್ತೆ ನಾದುರಸ್ತಿಯಲ್ಲಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಅಭಿವೃದ್ಧಿ ಮಾಡುವಂತೆ ಗ್ರಾಮಸ್ಥರೊಬ್ಬರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧ್ಯಕ್ಷರು, ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರ ಅನುದಾನ ಬಳಸಿ ಕಾಮಗಾರಿ ನಡೆಸುವ ಬಗ್ಗೆ ಯೋಜಿಸಲಾಗಿದೆ ಎಂದರು.
ಪಾದೂರು ಬಸದಿ ಪ್ರದೇಶದಲ್ಲಿ ಹಲವು ಸಮಯದಿಂದ ಲೋ ವೋಲ್ಟೇಜ್ ಸಮಸ್ಯೆಯಿದ್ದು, ಮೆಸ್ಕಾಂ ಗಮನಕ್ಕೆ ಈಗಾಗಲೇ ತಂದರೂ ಪರಿಹಾರವಾಗಿಲ್ಲ ಎಂದು ಸವಿತಾ ದೂರಿದರು. ಮೆಸ್ಕಾಂ ಕಾಪು ಸಹಾಯಕ ಇಂಜಿನಿಯರ್ ಅಜಯ್ ಪ್ರತಿಕ್ರಿಯಿಸಿ ಈ ಕುರಿತು ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಂಗಗಳ ಹಾವಳಿ ಕುರಿತು ಗ್ರಾಮಸ್ಥರು ಅರಣ್ಯಾಧಿಕಾರಿಗಳ ಬಳಿ ತಿಳಿಸಿದ್ದು, ಉತ್ತರಿಸಿದ ಅಧಿಕಾರಿ ಜೀವನ್ದಾಸ್ ಶೆಟ್ಟಿ, ಇದಕ್ಕೆ ಸೂಕ್ತ ಪರಿಹಾರ ಲಭ್ಯವಿಲ್ಲ. ಕಾಡುಪ್ರಾಣಿಗಳಿಂದ ಕೃಷಿಗೆ ಹಾನಿಯಾದರೆ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದರು. ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ವಿವಿಧ ಇಲಾಖೆ ಅಧಿಕಾರಿಗಳಾದ ಲೆಸ್ಟನ್ ಕ್ಲಾರೆನ್ಸ್ ಕರ್ನೆಲಿಯೋ, ಶ್ರೀಕಾಂತ್, ಪುಷ್ಪಲತಾ, ಪೂರ್ಣಿಮಾ, ನಿರ್ಮಾಲಾ ಮೆಂಡನ್, ಪಿಡಿಒ ವಿಲಾಸಿನಿ ಉಪಸ್ಥಿತರಿದ್ದರು. ಗುಮಾಸ್ತೆ ನಿರುಪಮಾ ವರದಿ ಮಂಡಿಸಿದರು. ಕಾರ್ಯದರ್ಶಿ ಪ್ರಸಾದ್ ಭಂಡಾರಿ ಸ್ವಾಗತಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿಯಿಂದ ದ್ವಿಚಕ್ರ ವಾಹನ ಸವಾರರ ಸಹಿತ ಜನರು ಅಪಾಯಕ್ಕೊಳಗಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು. ಪಶು ವೈದ್ಯಾಧಿಕಾರಿ ಡಾ. ಅರುಣ್ಕುಮಾರ್ ಹೆಗ್ಡೆ ಪ್ರತಿಕ್ರಿಯಿಸಿ, ಸಾಕು ನಾಯಿಗಳಿಗೂ ಲಸಿಕೆ ಹಾಗೂ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವಲ್ಲಿ ಜನ ಜವಾಬ್ದಾರಿ ವಹಿಸಬೇಕು. ತಾಲೂಕಿನ ಗ್ರಾಪಂಗಳ ಸಹಯೋಗದಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.