ಕನ್ನಡದ ಅಸ್ಮಿತೆಯ ಬೀಜ ಬಿತ್ತಿದ ಮಯೂರವರ್ಮ

4-kollegal-1,,
Published on

ಕೊಳ್ಳೇಗಾಲ : ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಕರ್ನಾಟಕದ ಮೊದಲ ರಾಜ ಮಯೂರ ವರ್ಮ ಎಂದು ಉಪನ್ಯಾಸಕ ಮಯೂರ ಹೇಳಿದರು.

ತಾಲೂಕಿನ ಕಾಮಗೆರೆಯ ಶ್ರೀ ಮಹದೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಜೆಎಸ್‌ಬಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ-2024’ ಸಮಾರಂಭದಲ್ಲಿ ಮಾತನಾಡಿದರು.

ಬನವಾಸಿ ಕದಂಬರ ಕರ್ನಾಟಕದ ಮೊದಲ ರಾಜ ಮಯೂರ ವರ್ಮ. ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಕನ್ನಡ ಅಸ್ಮಿತೆಯ ಬೀಜವನ್ನು ಬಿತ್ತಿದ್ದರು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದದಲ್ಲಿ ಜನಿಸಿದ ಮಯೂರ ವರ್ಮ, ಅಲ್ಲೇ ವಿದ್ಯಾಭ್ಯಾಸ ನಡೆಸಿ ಬಳಿಕ ಹೆಚ್ಚಿನ ಶಿಕ್ಷಣ ಪಡೆಯುವ ಹಂಬಲದಿಂದ ತನ್ನ ತಾತನ ಜತೆ ತಮಿಳುನಾಡಿನ ಕಂಚಿಗೆ ತೆರಳಿದ್ದರು. ಕೆಲ ವರ್ಷಗಳ ಬಳಿ ಮಯೂರ ವರ್ಮ ವಿದ್ಯಾಪಾರಂಗತರಾಗುತ್ತಾರೆ ಎಂದರು.

ಪಲ್ಲವ ಕ್ಷತ್ರಿಯರು ಮಯೂರ ವರ್ಮನನ್ನು ಕಟುವಾದ ಮಾತುಗಳಿಂದ ನಿಂದಿಸುತ್ತಾರೆ. ಈ ಅವಮಾನದಿಂದ ಆಕ್ರೋಶಗೊಂಡ ಮಯೂರ ವರ್ಮನಲ್ಲಿ ಪಲ್ಲವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ದೃಢಸಂಕಲ್ಪ ತೀವ್ರಗೊಂಡಿತು. ತಾನೂ ಕ್ಷತ್ರಿಯನಾಗಿ ಸೈನ್ಯವನ್ನು ಕಟ್ಟಿ, ಪಲ್ಲವರನ್ನು ಸೋಲಿಸಬೇಕೆಂದು ನಿಶ್ಚಯಿಸಿದ. ಬನವಾಸಿಗೆ ಹೋಗಿ ಕದಂಬ ವಂಶ ಸ್ಥಾಪಿಸಿ ಮಯೂರ ಶರ್ಮ ಎಂದಿದ್ದ ಹೆಸರನ್ನು ಮಯೂರ ವರ್ಮ ಎಂದಾಗುತ್ತದೆ ಎಂದು ಇತಿಹಾಸ ಹೇಳುತ್ತದೆ ಎಂದು ತಿಳಿಸಿದರು.

ತಾಳಗುಂದ ಒಂದು ಕಾಲದಲ್ಲಿ ಕದಂಬರ ಪ್ರಮುಖ ಕೇಂದ್ರವಾಗಿತ್ತು. ತಾಳಗುಂದದ ಸ್ತಂಭ ಶಾಸನ ಕನ್ನಡ ನಾಡನ್ನು ಆಳಿದ ಪ್ರಥಮ ಕನ್ನಡಿಗ ಅರಸನ ಬಗ್ಗೆ ಮಾಹಿತಿ ನೀಡುತ್ತದೆ. ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದಲ್ಲಿ ಭಾರತೀಯ ಪುರತಾತ್ವ ಇಲಾಖೆ 2012ರಲ್ಲಿ ಉತ್ಖನನದಿಂದ ಪತ್ತೆಯಾದ ಶಾಸನ ಇದು ಕ್ರಿ.ಶ. 450 ರಲ್ಲಿ ರಚನೆಯಾದ ಹಲ್ಮಿಡಿ ಶಾಸನಕ್ಕಿಂತಲೂ ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿದುಬಂದಿದೆ ಎಂದರು.

ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಶಶಿಕುಮಾರ್ ಮಾತನಾಡಿ, ಕನ್ನಡ ನಮ್ಮ ಅಸ್ಮಿತೆ, ನಮ್ಮ ಅಸ್ತಿತ್ವ. ಈ ನಮ್ಮ ಅಸ್ತಿತ್ವಕ್ಕೆ ತೊಂದರೆ ಬರುತ್ತಿದೆ. ಇದನ್ನು ತಡೆದು ನಿಲ್ಲಿಸಬೇಕು. ಕನ್ನಡಿಗರು ತಮ್ಮ ಸ್ವಂತಿಕೆಯನ್ನು ಹೆಚ್ಚಾಗಿ ಬಳಸಬೇಕು ಎಂದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನವನ್ನಾಗಿ ನೀಡಲಾಯಿತು. ಜತೆಗೆ ಶಾಲೆಯ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕರಾದ ಗಿರಿಜಾಂಬ, ಸಹ ಶಿಕ್ಷಕರಾದ ಉಮೇಶ, ಶಶಿಕಲಾ, ಮಮತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net