

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಮೀಸಲಾತಿ ಪ್ರಶ್ನಿಸಿ ಹೈ ಕೋರ್ಟ್ (ಧಾರವಾಡ ಪೀಠ) ಮೆಟ್ಟಿಲೇರಿದ್ದ ಪ್ರಕರಣ ವಿಲೇವಾರಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಿಗದಿತ ಮೀಸಲಾತಿಯಂತೆ ನಡೆಯಲಿದೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ಬ ಗೆ ಮೀಸಲಾಗಿದೆ. ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ್ದನ್ನು ಪ್ರಶ್ನಿಸಿ ಪಾಲಿಕೆಯ ಬಿಜೆಪಿ ಸದಸ್ಯ ಶಿವು ಮೆಣಸಿನಕಾಯಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಜೂ. 10ರಂದು ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಿತ್ತು.
ಆದರೆ, ತಾವೇ ದಾಖಲಿಸಿದ್ದ ಪ್ರಕರಣವನ್ನು ಮೆಣಸಿವಕಾಯಿ ಅವರು ಗುರುವಾರ ವಾಪಸ್ ಪಡೆದಿದ್ದು, ನ್ಯಾಯಾಲಯ ಪ್ರಕರಣವನ್ನು ವಿಲೇವಾರಿ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈ ಬಾರಿಯ ಬಿಜೆಪಿ ಆಡಳಿತದ ಐದು ಅವಧಿಯಲ್ಲಿ ಮೇಯರ್ ಸ್ಥಾನ ಒಮ್ಮೆ ಮಾತ್ರ ಸಾಮಾನ್ಯರಿಗೆ ಮೀಸಲಾಗಿದೆ. ಬೆಳಗಾವಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿಯ ಅಧಿಕಾರ ಅವಧಿಯಲ್ಲಿ 3 ಬಾರಿ ಸಾಮಾನ್ಯರಿಗೆ ಮೇಯರ್ ಸ್ಥಾನ ಮೀಸಲಾಗಿದೆ. ಹಾಲಿ ನಿಗದಿಯಾಗಿರುವ ಸಾಮಾನ್ಯ ಮಹಿಳಾ ಮೀಸಲಾತಿಯನ್ನು ಶಿವು ಮೆಣಸಿನಕಾಯಿ ಪ್ರಶ್ನಿಸಿದ್ದರು.
‘‘ಮೀಸಲಾತಿ ಪ್ರಶ್ನಿಸಿ 2 ತಿಂಗಳ ಹಿಂದೆಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆ. ಅದು ವಿಚಾರಣೆಗೆ ಬಂದು ಜೂ. 10ರಂದು ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬವಾದರೆ ಮುಂದಿನ ಮೇಯರ್-ಉಪ ಮೇಯರ್ ಆಡಳಿತ ಅವಧಿ ಮೊಟಕುಗೊಳ್ಳುತ್ತದೆ. ಹು-ಧಾ ಮಹಾನಗರ ಪಾಲಿಕೆಯಲ್ಲಿ ನಮ್ಮದೇ ಆಡಳಿತವಿದೆ. ಈ ಕಾರಣಕ್ಕೆ ಕೇಸ್ ವಾಪಸ್ ಪಡೆದಿದ್ದೇನೆ’’ ಎಂದು ಮೆಣಸಿಕಾಯಿ ಹೇಳಿದ್ದಾರೆ.
ಮೀಸಲಾತಿ ಪ್ರಶ್ನಿಸಿ ಶಿವು ಮೆಣಸಿನಕಾಯಿ ನ್ಯಾಯಾಲಯದ ಮೆಟ್ಟಿಲೇರಿದ್ದು ಬಿಜೆಪಿ ಆಂತರಿಕ ವಲಯದಲ್ಲಿ ಅಪಸ್ವರಕ್ಕೆ ಕಾರಣವಾಗಿತ್ತು. ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದಾಗ್ಯೂ ಪಕ್ಷದ ವರಿಷ್ಠರ ಗಮನಕ್ಕೆ ತರದೇ ಮೆಣಸಿನಕಾಯಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ಬಿಜೆಪಿ, ಮಹಿಳಾ ವಿರೋಧಿ ಎಂಬ ಆರೋಪಕ್ಕೆ ಗುರಿಯಾಗಿತ್ತು. ಇದಕ್ಕೆ ಪಕ್ಷದ ವರಿಷ್ಠರು ಸಿಟ್ಟಾಗಿದ್ದರು ಎನ್ನಲಾಗಿದೆ. ವರಿಷ್ಠರ ಒತ್ತಡಕ್ಕೆ ಮಣಿದು ಮೆಣಸಿನಕಾಯಿ ನ್ಯಾಯಲಯದಿಂದ ಪ್ರಕರಣವನ್ನು ಹಿಂದಕ್ಕೆ ಪಡೆದರು ಎಂದು ರ್ಚಚಿತವಾಗಿದೆ.
ಹು-ಧಾ ಮಹಾನಗರ ಪಾಲಿಕೆಯ ಹಾಲಿ ಮೇಯರ್ ರಾಮಪ್ಪ ಬಡಿಗೇರ ಹಾಗೂ ಉಪ ಮೇಯರ್ ದುರ್ಗಮ್ಮ ಬಿಜವಾಡ ಅವಧಿ ಜೂ. 28ಕ್ಕೆ ಕೊನೆಗೊಳ್ಳಲಿದೆ. ಮುಂದಿನ ಅವಧಿಗೆ ನಿಗದಿತ ಮೀಸಲಾತಿಯಂತೆ ಮೇಯರ್-ಉಪ ಮೇಯರ್ ಚುನಾವಣೆ ನಡೆಸುವಂತೆ ಪಾಲಿಕೆ ಆಯುಕ್ತರು, ಈಗಾಗಲೇ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮತದಾರರ ಯಾದಿ ಕಳುಹಿಸಿದ್ದಾರೆ.
ಪ್ರಾದೇಶಿಕ ಆಯುಕ್ತರು ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸಬೇಕಿದೆ.