ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಂಟು ಬಸ್ ಬೇ ಸ್ಥಳ ಅಂತಿಮ- ‘ಮೇಯರ್ ಫೋನ್‌ ಇನ್’ ನಲ್ಲಿ ಸುಧೀರ್ ಶೆಟ್ಟಿ ಹೇಳಿಕೆ

IMG-20230930-WA0216
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಹಾನಗರ ಪಾಲಿಕೆ ವ್ಯಾಪ್ತಿಯ 53 ಪ್ರದೇಶಗಳಲ್ಲಿ ಬಸ್ ಬೇ (ಪ್ರಯಾಣಿಕರು ಬಸ್ ಹತ್ತಲು ಹಾಗೂ ಇಳಿಯಲು ಅನುಕೂಲವಾಗುವಂತೆ ರಸ್ತೆ ಬದಿ ನಿಗದಿಪಡಿಸಿದ ಹೆಚ್ಚುವರಿ ಜಾಗ) ನಿರ್ಮಿಸುವ ಕುರಿತು ಪೊಲೀಸ್ ಇಲಾಖೆ ಪ್ರಸ್ತಾವನೆ ಕಳುಹಿಸಿದ್ದು, ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ, ಲೇಡಿಹಿಲ್, ಕಂಕನಾಡಿ ಜಂಕ್ಷನ್, ಬಂಟ್ಸ್‌ಹಾಸ್ಟೆಲ್ ಸಹಿತ ಎಂಟು ಪ್ರದೇಶಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.
ಮೇಯರ್ ಕಚೇರಿಯಲ್ಲಿ ಶನಿವಾರ ‘ಮೇಯರ್ ಫೋನ್‌ಇನ್’ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ವಸತಿ ಸಮುಚ್ಚಯದ ಪಾರ್ಕಿಂಗ್ ಪ್ರದೇಶವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಬಗ್ಗೆ 13 ದೂರುಗಳು ಬಂದಿದ್ದು, ನಿಯಮ ಉಲ್ಲಂಘಿಸಿದ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ತಪ್ಪಿತಸ್ಥರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.
ಪಾರ್ಕ್‌ಗೆ ಬೆಳಕು
ಶಕ್ತಿನಗರದಲ್ಲಿರುವ ಪಾರ್ಕ್‌ನಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಒದಗಿಸಿಕೊಡುವುದಾಗಿ 11 ತಿಂಗಳ ಹಿಂದೆ ಇದರ ಉದ್ಘಾಟನೆ ಸಂದರ್ಭ ಅಂದಿನ ಮೇಯರ್ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಲ್ಲ. ಪಾರ್ಕ್‌ನ ವಾಕಿಂಗ್ ಟ್ರಾೃಕ್‌ನಲ್ಲಿ ದಿನಂಪ್ರತಿ ಬೆಳಗ್ಗೆ 5ರಿಂದ ಬೆಳಕು ಹರಿಯುವ ತನಕ ಮತ್ತು ರಾತ್ರಿ ಕೂಡ ಸುತ್ತಮುತ್ತಲಿನ ಜನ ವಾಕಿಂಗ್ ಮಾಡುತ್ತಾರೆ. ಪಾರ್ಕ್‌ನಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಮುಂದಾಗುವಂತೆ ಸ್ಥಳೀಯ ನಿವಾಸಿ ಪ್ರಭಾಕರ್ ವಿನಂತಿಸಿದರು.
ವಸತಿ ಪ್ರದೇಶದಲ್ಲಿ ಗ್ಯಾಸ್ ಟ್ಯಾಂಕರ್ ನಿಲುಗಡೆ
ಸುರತ್ಕಲ್ ಕಾನದಲ್ಲಿರುವ ಜನವಸತಿ ಪ್ರದೇಶದಲ್ಲಿ ಗ್ಯಾಸ್ ಟ್ಯಾಂಕರ್‌ಗಳು ಸುದೀರ್ಘ ಹೊತ್ತು ನಿಲ್ಲಿಸುತ್ತಾರೆ ಎಂದು ಸ್ಥಳೀಯ ನಿವಾಸಿ ದಯಾನಂದ ಆಕ್ಷೇಪಿಸಿದರು. ಬೈಕಂಪಾಡಿ ಕುಳಾಯಿಯಲ್ಲಿ ಇರುವ ಇಂದು ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ದೀರ್ಘಕಾಲದಿಂದ ಸೋರಿಕೆ ಇದ್ದು, ಇದರಿಂದ ಸುತ್ತಲಿನ ಜನರಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ರಮೇಶ್ ತಿಳಿಸಿದರು.
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಶೌಚಗೃಹ
ದಿನಂಪ್ರತಿ ಸಾವಿರಾರು ಜನ, ಪ್ರಯಾಣಿಕರು ನಡೆದಾಡುವ ಪಂಪ್‌ವೆಲ್ ಮೇಲ್ಸೇತುವೆ ಸಮೀಪದ ಶೌಚಗೃಹದ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ. ಅಲ್ಲದೆ ಈ ಶೌಚಗೃಹ ಜನರಿಗೆ ಗೋಚರಿಸುವ ಕಡೆ ಇಲ್ಲ. ಇಲ್ಲಿ ಸುಸಜ್ಜಿತ ಶೌಚಗೃಹ ಅಗತ್ಯ ಎಂದು ಲಂಬೋದರ ದೇವಾಡಿಗ ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಆನಂದ್, ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ಗಣೇಶ್ ಕುಲಾಲ್ ಉಪಸ್ಥಿತರಿದ್ದರು.

ಬಾಕ್ಸ್
ಅಣಬೆ ಫ್ಯಾಕ್ಟರಿಗೆ ಪಾಲಿಕೆ ತಂಡ
ವಾಮಂಜೂರಿನ ಅಣಬೆ ಫ್ಯಾಕ್ಟರಿ ಹೊರಸೂಸುವ ತ್ಯಾಜ್ಯದಿಂದ ಪರಿಸರದಲ್ಲಿ ದುರ್ನಾತ ಹರಡಿದೆ. ಫ್ಯಾಕ್ಟರಿಗೆ ಬಂದು ಹೋಗುವ ದೊಡ್ಡ ವಾಹನಗಳಿಂದ ರಸ್ತೆಗಳೂ ಹಾಳಾಗಿವೆ. ಇಲ್ಲಿನ ವಾತಾವರಣದಲ್ಲಿ ಸಹಜ ಜೀವನಕ್ಕೆ ಅಡ್ಡಿಯಾಗಿದೆ. ಆದ್ದರಿಂದ ಈ ಫ್ಯಾಕ್ಟರಿಯನ್ನು ಜನವಸತಿ ಕಡಿಮೆ ಇರುವ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಗೀತಾ ಮತ್ತು ರೀಟಾ ಮನವಿ ಮಾಡಿದರು. ಫ್ಯಾಕ್ಟರಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಕುರಿತು ಜಿಲ್ಲಾಧಿಕಾರಿ ಮಾರ್ಗಸೂಚಿ ಹೊರಡಿಸಿದ್ದಾರೆ. ಅದು ಪಾಲನೆಯಾಗಿದೆಯೇ ಎಂದು ಪಾಲಿಕೆಯ ತಂಡ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಜಿಲ್ಲಾಧಿಕಾರಿಗೆ ವರದಿ ನೀಡಲಿದೆ ಎಂದು ಮೇಯರ್ ತಿಳಿಸಿದರು.

ಫುಟ್‌ಪಾತ್, ರಸ್ತೆ ಅತಿಕ್ರಮಣ
ಬೀದಿಬದಿ ವ್ಯಾಪಾರಸ್ಥರು ಅನೇಕ ಕಡೆ ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣ ನಡೆಸಿದ್ದಾರೆ. ನಗರದ ರಸ್ತೆಗಳು ಅಗಲಗೊಂಡರೂ ಅದರ ಪ್ರಯೋಜನ ಜನರಿಗೆ ಸಿಗುತ್ತಿಲ್ಲ. ಅಗಲ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಲಾಗುತ್ತಿದೆ. ಈ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ಮೇಲ್ವಿಚಾರಣೆ ಮಾಡಲು ಸಾರ್ವಜನಿಕರು ಹಾಗೂ ತಜ್ಞರನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಮೇಯರ್, ಸಂಚಾರಿ ಪೊಲೀಸ್, ಅಧಿಕಾರಿಗಳ ಜತೆ ಸಮಾಲೋಚಿಸಿ ಫುಟ್‌ಪಾತ್ ಅತಿಕ್ರಮಣ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರತಿ ತಿಂಗಳೂ ಫೋನ್‌ಇನ್
ಪ್ರತಿ ತಿಂಗಳು ಫೋನ್‌ಇನ್ ಕಾರ್ಯಕ್ರಮ ನಡೆಸಲಾಗುವುದು. ಒಂದು ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪ್ರಸ್ತಾಪಿಸಿದ ಸಮಸ್ಯೆಗಳಿಗೆ ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಮುಂದಿನ ತಿಂಗಳ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು. ಶನಿವಾರದ ಫೋನ್‌ಇನ್ ಒಂದು ಗಂಟೆ ಅವಧಿಯಲ್ಲಿ 23 ಫೋನ್ ಕರೆಗಳು ಬಂದಿದ್ದವು.

ಗಮನಕ್ಕೆ ತಂದ ಅರ್ಧ ಗಂಟೆಯಲ್ಲೇ ಗುಜರಿ ತೆರವು
ಸುರತ್ಕಲ್ ಚೊಕ್ಕಬೆಟ್ಟುವಿನ ಕಾಂಕ್ರೀಟ್ ರಸ್ತೆಯ ಅರ್ಧ ಭಾಗವನ್ನು ಒಂದು ಅಂಗಡಿಯ ಗುಜರಿ ವಸ್ತುಗಳು ತುಂಬಿಕೊಂಡಿವೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಮಹಾಬಲ ಎಂಬುವವರು ದೂರು ನೀಡಿದರು. ಈ ಅತಿಕ್ರಮಣದ ಬಗ್ಗೆ ಫೋನ್‌ಇನ್‌ನಲ್ಲಿ ಪ್ರಸ್ತಾಪವಾದ ಅರ್ಧ ಗಂಟೆಯಲ್ಲೇ ತೆರವು ಮಾಡಲಾಗಿದೆ. ಮೇಯರ್ ಫೋನ್‌ಇನ್ ಕಾರ್ಯಕ್ರಮ ಮುಗಿದ ಕೂಡಲೇ ಸ್ಥಳಕ್ಕೆ ತೆರಳಿದ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿದ್ದ ಗುಜರಿ ಸಾಮಗ್ರಿ ತೆರವುಗೊಳಿಸಿದರು.
ಫೋಟೋ : ಎಂಎನ್‌ಜಿ- ಎಸ್‌ಇಪಿ 30- ಚೊಕ್ಕಬೆಟ್ಟು ಗುಜರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net