

ಮೈಸೂರು: ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು, ಯುಜಿಡಿ ಸಂಪರ್ಕ ಹಾಳಾಗಿರುವುದನ್ನು ಪಾದಯಾತ್ರೆ ನಡೆಸುವ ಮೂಲಕ ವೀಕ್ಷಿಸಿದ ಮೇಯರ್ ಶಿವಕುಮಾರ್ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ನಗರಪಾಲಿಕೆಯ ವಾರ್ಡ್ 28 ಮತ್ತು 29ರ ವ್ಯಾಪ್ತಿಗೆ ಬರುವ ಗಾಂಧಿನಗರದ ಡಾ.ಅಂಬೇಡ್ಕರ್ ಪ್ರತಿಮೆಯಿಂದ ಪಾದಯಾತ್ರೆ ಆರಂಭಿಸಿದ ಮೇಯರ್ ಹಲವು ಸಮಸ್ಯೆಗಳನ್ನು ಕಣ್ಣಾರೆ ನೋಡಿದರು. ರಸ್ತೆಗಳು ಹಾಳಾಗಿರುವ ಜತೆಗೆ ಒಳಚರಂಡಿ ಸಂಪರ್ಕದ ಲೈನುಗಳು ಹಾದುಹೋಗಿರುವ ಕಾರಣ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿದ್ದನ್ನು ಕಂಡು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಯುಜಿಡಿ ಲೈನ್ ಹಾಳಾಗಿದ್ದರೂ ದುರಸ್ತಿಪಡಿಸದೆ ರಸ್ತೆಯಲ್ಲಿ ಗಲೀಜು ನೀರು ಹರಿದುಹೋಗುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆಂದು ನಿವಾಸಿಗಳು ದೂರಿದರು. ತಕ್ಷಣವೇ ಸ್ಪಂದಿಸಿದ ಮೇಯರ್ ಗಾಂಧಿನಗರದ ಯುಜಿಡಿ ಲೈನ್‌ನ್ನು ಬದಲಿಸಿ ಹೊಸದಾಗಿ ಅಳವಡಿಸಲು ಎರಡು-ಮೂರು ದಿನಗಳಲ್ಲಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಹೇಳಿದರು.
ಗಾಂಧಿನಗರದ 5ರಿಂದ 10ನೇ ಕ್ರಾಸ್ ತನಕ ಪಾದಯಾತ್ರೆ ನಡೆಸಿ ಮೋರಿ,ಚರಂಡಿ,ಯುಜಿಡಿ ಇನ್ನಿತರ ಸಮಸ್ಯೆಗಳನ್ನು ಆಲಿಸಿದರು. ನಗರಪಾಲಿಕೆ ಸದಸ್ಯ ಅಸ್ರತುಲ್ಲಾ, ಮುಖಂಡ ಶರತ್, ಯುಜಿಡಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಿಂಧು, ಎಇಇ ಮಹೇಶ್ ಇತರರಿದ್ದರು.