ಮಂಗಳೂರು ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ ಆಯ್ಕೆ

Published on

ಮಂಗಳೂರು: ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಮತ್ತು ಉಪಮೇಯರ್ ಆಗಿ ಸುಮಂಗಲಾ ರಾವ್ ಚುನಾಯಿತರಾದರು.

60 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-44, ಕಾಂಗ್ರೆಸ್-14 ಮತ್ತು ಎಸ್‌ಡಿಪಿಐ -2 ಸದಸ್ಯರಿದ್ದಾರೆ. ಸ್ಥಳೀಯ ಶಾಸಕರು ಸೇರಿ ಒಟ್ಟು 64 ಮತದಾರರಲ್ಲಿ ಮಂಗಳವಾರ 62 ಮಂದಿ ಭಾಗವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಮತ್ತು ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಗೈರು ಹಾಜರಾಗಿದ್ದರು.

ಚುನಾವಣೆಯಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ಮತ್ತು ಡಾ.ವೈ.ಭರತ್ ಶೆಟ್ಟಿ ಹಾಗೂ ಬಿಜೆಪಿಯ 44 ಸದಸ್ಯರು ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಪ್ರೇಮಾನಂದ ಶೆಟ್ಟಿ 46 ಮತ ಪಡೆದರೆ, ಕಾಂಗ್ರೆಸ್‌ನ ಅನಿಲ್ ಕುಮಾರ್ 14 ಮತ ಪಡೆದರು. ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಸುಮಂಗಲಾ ರಾವ್ 46 ಮತ ಪಡೆದರೆ, ಕಾಂಗ್ರೆಸ್‌ನ ಜೆಸಿಂತಾ ವಿಜಯ ಆಲ್ಫ್ರೆಡ್ 14 ಮತ ಪಡೆದರು. ಎಸ್‌ಡಿಪಿಐ ಸದಸ್ಯರು ತಟಸ್ಥರಾಗಿ ಉಳಿದರು. ಇದೇ ವೇಳೆ ನಾಲ್ಕು ಸ್ಥಾಯಿ ಸಮಿತಿಗಳ 28 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು.

ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಚುನಾವಣಾಧಿಕಾರಿಯಾಗಿದ್ದರು. ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಮನಪಾ ಉಪ ಆಯುಕ್ತ ಡಾ.ಸಂತೋಷ್ ಕುಮಾರ್ ಮತ ಪ್ರಕ್ರಿಯೆ ವೇಳೆ ಉಪಸ್ಥಿತರಿದ್ದರು.

ಪ್ರವೇಶ ನಿರ್ಬಂಧಕ್ಕೆ ಜನರಿಂದ ಆಕ್ಷೇಪ: ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಪಾಲಿಕೆ ಕಚೇರಿಗೆ ಪ್ರವೇಶ ನಿರ್ಬಂಧಿಸಿ ಪೊಲೀಸ್ ಭದ್ರತೆ ನೀಡಲಾಗುತ್ತು. ಮಾಧ್ಯದವರಿಗೂ ಒಳ ಪ್ರವೇಶಿಸಲು ಪಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರವೇಶ ನಿರ್ಬಂಧ ಸಂಬಂಧಿಸಿ ಪೂರ್ವ ಮಾಹಿತಿ ಇಲ್ಲದೆ ಕಚೇರಿ ಕೆಲಸಕ್ಕೆ ಬಂದ ಜನ ಪರದಾಡುವಂತಾಯಿತು. ಇದರಿಂದ ಆಕ್ರೋಶಗೊಂಡ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರವೇಶ ದ್ವಾರದ ಎದುರು ಸಾರ್ವಜನಿಕರಿಗೆ ನಿಷೇಧ ಎಂಬ ಬೋರ್ಡ್ ಹಾಕಿರುವ ಬಗ್ಗೆ ಕೆಲವರು ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಮನಪಾ ಅಧಿಕಾರಿಗಳಿಗೆ ಕರೆ ಮಾಡಿ ನಿರ್ಬಂಧ ಹೇರಿರುವ ಬಗ್ಗೆ ಪ್ರಶ್ನಿಸಿದರು. ಸಾರ್ವಜನಿಕರಿಗೆ ಪ್ರವೇಶ ತಡೆಯಲು ಮನಪಾ ಆಡಳಿತದಿಂದ ಸೂಚನೆ ನೀಡಲಾಗಿಲ್ಲ ಎಂಬ ಉತ್ತರ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಬಳಿಕ ಒಳ ಪ್ರವೇಶಕ್ಕೆ ಅವಕಾಶ ನೀಡಿದರು.

ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಆಶ್ವಾಸನೆ

ಮಂಗಳೂರು ಮಹಾನಗರ ಪಾಲಿಕೆಯ ಎಲ್ಲ ಸದಸ್ಯರ ಸಹಕಾರ ಪಡೆದು, ಸಂಸದರು ಹಾಗೂ ಶಾಸಕರ ಮಾರ್ಗದರ್ಶನದಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಆಶ್ವಾಸನೆ ನೀಡಿದರು.

ಮೇಯರ್ ಆಗಿ ಆಯ್ಕೆಯಾದ ಬಳಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ‘ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲಾಗುವುದು’ ಎಂದರು.

ಅನುಭವಿ ರಾಜಕಾರಣಿ: ಸತತ 5ನೇ ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ಪ್ರೇಮಾನಂದ ಶೆಟ್ಟಿ ಅನುಭವಿ ಜನಪ್ರತಿನಿಧಿ. ಅವರ ಮೇಯರ್ ಅವಧಿಯಲ್ಲಿ ಸ್ಮಾರ್ಟ್ ಸಿಟಿ, ಜಲಸಿರಿ, ಎಡಿಬಿ-2 ಮುಂತಾದ ಸುಮಾರು 2500 ಕೋಟಿ ರೂ. ಮೊತ್ತದ ಕಾಮಗಾರಿ ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಶುಭ ಹಾರೈಸಿದರು.

ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ ‘ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಅವರಿಗೆ ಪಾಲಿಕೆ ಆಡಳಿತಕ್ಕೆ ಸಂಬಂಧಿಸಿ ಅಪಾರ ಜ್ಞಾನವಿದೆ. ಪಾಲಿಕೆಯನ್ನು ಯಶ್ವಸಿಯಾಗಿ ಮುನ್ನಡೆಸುವ ಮೂಲಕ ಹೆಚ್ಚಿನ ಅಭಿವೃದ್ಧಿ ಸಾಧಿಸುವ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು. ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್ ಮಾತನಾಡಿ ಪಾಲಿಕೆಯ ಆಗುಹೋಗುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ, ನೂತನ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳು ದೊರೆಯುವಂತಾಗಲಿ ಎಂದರು.

ನಿಕಟಪೂರ್ವ ಮೇಯರ್ ದಿವಾಕರ ಪಾಂಡೇಶ್ವರ, ಉಪಮೇಯರ್ ವೇದಾವತಿ, ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಕಾಂಗ್ರೆಸ್ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಭಾಸ್ಕರ ಮೊಯ್ಲಿ, ಎ.ಸಿ.ವಿನಯರಾಜ್, ಅಬ್ದುಲ್ ಲತೀಫ್ ಮುಂತಾದವರು ನೂತನ ಮೇಯರ್, ಉಪ ಮೇಯರ್‌ಗೆ ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net