ಪೌರಕಾರ್ಮಿಕರ ದಿನಾಚರಣೆ, ನಗರ ಸೌಂದರ್ಯೀಕರಣಕ್ಕೆ ಸ್ವಚ್ಛತೆಗಾರರ ಕೊಡುಗೆ ಅನನ್ಯ ಎಂದ ಮಹಾಪೌರ ಮಡಿವಾಳಪ್ಪ ಕರಡಿ

POURA KARMIKARA DINACHARANE
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಮಹಾಪೌರ ಮಡಿವಾಳಪ್ಪ ಕರಡಿ ಉದ್ಘಾಟಿಸಿದರು. ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಉಪಮಹಾಪೌರ ಸುಮಿತ್ರಾ ಜಾಧವ, ಸದಸ್ಯೆ ಆರತಿ ಶಹಾಪುರ ಮತ್ತಿತರರಿದ್ದಾರೆ.
Published on

ವಿಜಯಪುರ: ಗ್ರಾಮ, ಪಟ್ಟಣ ಹಾಗೂ ನಗರವನ್ನು ಸ್ವಚ್ಛವಾಗಿರಿಸಿ ಸುಂದರವಾಗಿಸುವಲ್ಲಿ ಪೌರಕಾರ್ಮಿಕರ ಕಾರ್ಯ ಮಹತ್ವದ್ದಾಗಿದೆ ಎಂದು ಮಹಾಪೌರ ಮಡಿವಾಳಪ್ಪ ಕರಡಿ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಗರದ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಬೇಕು. ಸರ್ಕಾರ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಜೀವನ ಸುಂದರವಾಗಿ ರೂಪಿಸಿಕೊಳ್ಳುವಂತೆ ತಿಳಿಸಿದರು.

ಉಪಮಹಾಪೌರ ಸುಮಿತ್ರಾ ಜಾಧವ ಮಾತನಾಡಿ, ಪೌರಕಾರ್ಮಿಕರು ತಮ್ಮ ಕಾರ್ಯದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಭೇಕು. ಜೊತೆಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಉತ್ತಮ ಶಿಕ್ಷಣ ನೀಡಬೇಕು ಎಂದರು.

ಸದಸ್ಯೆ ಆರತಿ ಶಹಾಪುರ ಮಾತನಾಡಿ, ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.

ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ವತಿಯಿಂದ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ನೀಡಿದ್ದು, ತಮ್ಮ ದೈನಂದಿನ ಕಾರ್ಯಗಳಲ್ಲಿ ಸುರಕ್ಷಾ ಪರಿಕರಗಳನ್ನು ಉಪಯೋಗಿಸಿ ಮುಂಜಾಗ್ರತೆಯಿದ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಪೌರ ಕಾರ್ಮಿಕರ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳಿದ್ದು, ಈಗಾಗಲೇ ಪಾಲಿಕೆ ವತಿಯಿಂದ ಕಾರ್ಮಿಕರಿಗೆ ಮನೆಯ ಹಕ್ಕು ಪತ್ರ ಹಂಚಿಕೆ ಮಾಡಲಾಗಿದೆ. ಕಾಲ ಕಾಲಕ್ಕೆ ಆರೋಗ್ಯ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಶಿವರುದ್ರ ಬಾಗಲಕೋಟ, ಆರೋಗ್ಯಾಧಿಕಾರಿ ಸಂಗಣ್ಣ ಲಕ್ಕಣ್ಣವರ, ಉಪ ಆಯುಕ್ತ ಮಹಾವೀರ ಬೋರಣ್ಣವರ ಮತ್ತಿತರರಿದ್ದರು.

ಪೌರಕಾರ್ಮಿಕರಿಗಾಗಿ ಆಯೋಜಿಸಲಾದ ವಿವಿಧ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಸಾಧನೆ ಮಾಡಿದ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net