

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಠರಾವುಗಳ ತಿದ್ದುಪಡಿ, ಮೇಯರ ಸಹಿದ ಮಾಡಿದ ಗೊತ್ತುವಳಿ ಮೂಲಪ್ರತಿ ಕಾಣೆ ವಿಷಯ ಇದೀಗ ತೀವ್ರ ರೂಪ ಪಡೆದುಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ರಾಜ್ಯಪಾಲರಿಗೆ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ದೂರು ಸಲ್ಲಿಸಿದ್ದಾರೆ.
ಇದು ಮೇಲ್ನೋಟಕ್ಕೆ ಪಾಲಿಕೆ ಪರಿಷತ್ ಸಭೆ ವಿಷಯವಾಗಿದ್ದರೂ ಒಳಗೊಳಗೆ ಸಚಿವ ಸತೀಶ ಜಾರಕಿಹೊಳಿಮತ್ತು ಶಾಸಕ ಅಭಯ ಪಾಟೀಲ ಅವರ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಮತ್ತೊಂದೆಡೆ ವೈಯಕ್ತಿಕ ಪ್ರತಿಷ್ಠೆಗೆ ಮಹಾನಗರ ಪಾಲಿಕೆ ಆಡಳಿತಕ್ಕೆ ಹೊಡೆತ ಬಿದ್ದಿದೆ.
ಪಾಲಿಕೆಯಲ್ಲಿರುವ ಶಾಸಕ ರಾಜು ಸೇಠ್ ಕಚೇರಿಯಲ್ಲಿ ಬುಧವಾರ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಹಾಲಿ, ಮಾಜಿ ಸದಸ್ಯರು, ಮುಖಂಡರ ಸಭೆ ಹಮ್ಮಿಕೊಳ್ಳಲಾಗಿದೆ.
ಇತ್ತ ಮೇಯರ್ ಅವರು, ಸಚಿವ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಪಾಲಿಕೆ ವಿಸರ್ಜನೆ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸಚಿವರ ಹಸ್ತಕ್ಷೇಪ, ಒತ್ತಡ ಮತ್ತು ಕಿರುಕುಳದಿಂದಾಗಿ ಸುಗಮವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಕುರಿತು ಚರ್ಚಿಸಲು ಸಮಯ ಮತ್ತು ದಿನಾಂಕ ನಿಗದಿ ಪಡಿಸುವಂತೆ ಪತ್ರದ ಮೂಲಕ ವಿನಂತಿಸಿದ್ದಾರೆ.