

ಹುಬ್ಬಳ್ಳಿ: ಪೌರ ಕಾರ್ವಿುಕರಿಗೆ ಬೆಳಗ್ಗೆ ಬಿಸಿ-ಬಿಸಿಯಾಗಿರುವ ಉಪಾಹಾರವನ್ನೇ ಪೂರೈಸಬೇಕು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಗುತ್ತಿಗೆದಾರರಿಗೆ ಸೂಚಿಸಿದರು.
ಮೇಯರ್ ವೀಣಾ ಬರದ್ವಾಡ ಅವರೊಂದಿಗೆ ಗುರುವಾರ ಬೆಳಗ್ಗೆ ಭೈರಿದೇವರಕೊಪ್ಪದಲ್ಲಿರುವ ಉಪಾಹಾರ ತಯಾರಿಸುವ ಘಟಕಕ್ಕೆ ಭೇಟಿ ನೀಡಿದ ಅವರು, ಪೌರ ಕಾರ್ವಿುಕರಿಗೆ ಗುಣಮಟ್ಟವಿಲ್ಲದ ಉಪಾಹಾರ ಪೂರೈಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಪೌರ ಕಾರ್ವಿುಕರಿಗೆ ಗುಣಮಟ್ಟದ ಉಪಾಹಾರ ನೀಡಬೇಕು. ಅಡುಗೆ ತಯಾರಿಸಲು ಸ್ಥಳೀಯರನ್ನು ನೇಮಿಸಿಕೊಳ್ಳಬೇಕು ಹಾಗೂ ರುಚಿಕಟ್ಟಾದ ಆಹಾರ ತಯಾರಿಸಬೇಕು ಎಂದು ಹೇಳಿದರು.
ಅಡುಗೆ ತಯಾರಿಸು ಪಾತ್ರೆಗಳು ಶುಚಿಯಾಗಿರಬೇಕು. ತರಕಾರಿಗಳು ತಾಜಾ ಇರಬೇಕು. ಉತ್ತಮ ಪ್ಯಾಕಿಂಗ್ ವ್ಯವಸ್ಥೆಯಲ್ಲಿ ಆಹಾರ ಪೊಟ್ಟಣವನ್ನು ನೀಡಬೇಕು. ಅನ್ನ ಪದಾರ್ಥದಂಥ ಉಪಾಹಾರವನ್ನು ಕಡಿಮೆ ಮಾಡಿ ಇಡ್ಲಿ, ಅವಲಕ್ಕಿ ಹಾಗೂ ಇತರೇ ಉಪಾಹಾರವನ್ನು ಪೂರೈಸಬೇಕು. ಪೌರಕಾರ್ವಿುಕರು ಉಪಾಹಾರ ಸೇವಿಸಿದ ನಂತರ ಅವರಿಂದ ರುಚಿ ಹಾಗೂ ಪ್ರಮಾಣದ ಬಗ್ಗೆ ಅಭಿಪ್ರಾಯವನ್ನು ಪಡೆದು, ಏನಾದರೂ ಸಲಹೆಗಳಿದ್ದಲ್ಲಿ ಅದರಂತೆಯೇ ಮಾರನೇ ದಿನ ಉಪಾಹಾರವನ್ನು ತಯಾರಿಸಿ ನೀಡಬೇಕು ಎಂದು ಸೂಚಿಸಿದರು.
ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಇಇ ಸಂತೋಷ ಯರಂಗಳಿ ಇದ್ದರು.