ಧಾರವಾಡಕ್ಕೆ ಮೇಯರ್, ಹುಬ್ಬಳ್ಳಿಗೆ ಉಪ ಮೇಯರ್ ಪಟ್ಟ

New Mayer election New10000
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಧಾರವಾಡದ 19ನೇ ವಾರ್ಡ್​ನ ಜ್ಯೋತಿ ಪಾಟೀಲ ಹಾಗೂ ಉಪ ಮೇಯರ್ ಆಗಿ ಹುಬ್ಬಳ್ಳಿಯ 41ನೇ ವಾರ್ಡ್​ನ ಸಂತೋಷ ಚವ್ಹಾಣ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಮಹಾಪೌರರ ಸ್ಥಾನಕ್ಕೆ ಬಿಜೆಪಿಯ ಜ್ಯೋತಿ ಪಾಟೀಲ, ಕಾಂಗ್ರೆಸ್​ನ ಸುವರ್ಣಾ ಕಲಕುಂಟ್ಲ ಅವರು ತಲಾ ಎರಡು ನಾಮಪತ್ರ ಹಾಗೂ ಎಐಎಂಐಎಂನ ವಹೀದಾಖಾನಂ ಕಿತ್ತೂರ ಒಂದು ನಾಮಪತ್ರ ನಾಮಪತ್ರ ಸಲ್ಲಿಸಿದ್ದರು. ಉಪ ಮಹಾಪೌರರ ಸ್ಥಾನಕ್ಕೆ ಬಿಜೆಪಿಯ ಸಂತೋಷ ಚವ್ಹಾಣ ಹಾಗೂ ಕಾಂಗ್ರೆಸ್​ನ ಶಂಭುಗೌಡ ಸಾಲಮನಿ ತಲಾ ಎರಡು ನಾಮಪತ್ರ ಸಲ್ಲಿಸಿದ್ದರು. ಎಲ್ಲ ನಾಮಪತ್ರ ಕ್ರಮಬದ್ಧ ಇರುವುದಾಗಿ ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಘೋಷಿಸಿದರು.

ಜ್ಯೋತಿ ಪಾಟೀಲ ಹಾಗೂ ಸಂತೋಷ ಚವ್ಹಾಣ ತಲಾ 47 ಮತಗಳನ್ನು ಪಡೆಯುವ ಮೂಲಕ ಮಹಾಪೌರ, ಉಪ ಮಹಾಪೌರರಾಗಿ ಚುನಾಯಿತಗೊಂಡರು. ಮಹಾಪೌರ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಸುವರ್ಣಾ ಕಲಕುಂಟ್ಲ 37 ಮತಗಳನ್ನು ಹಾಗೂ ಎಐಎಂಐಎಂನ ವಹೀದಾಖಾನಂ ಕಿತ್ತೂರ 3 ಮತಗಳನ್ನು ಪಡೆದರು.

ಉಪ ಮಹಾಪೌರ ಸ್ಥಾನದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್​ನ ಶಂಭುಲಿಂಗ ಸಾಲಮನಿ 37 ಮತಗಳನ್ನು ಪಡೆದರು. 82 ಚುನಾಯಿತ ಸದಸ್ಯರು ಇರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಂಸದ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸೇರಿಸಿ 90 ಮತಗಳಿದ್ದವು. ಇವರಲ್ಲಿ ಶಾಸಕರಾದ ವಿನಯ ಕುಲಕರ್ಣಿ, ಪ್ರದೀಪ ಶೆಟ್ಟರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರ ಗೈರಾಗಿದ್ದರು. 87 ಮತಗಳು ಚಲಾವಣೆಯಾದವು.

ಕೈ ಎತ್ತುವ ಮೂಲಕ ಮತದಾನ ನಡೆಯಿತು. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಇದ್ದರು.

ಮೊದಲ ಬಾರಿಗೆ ಆಯ್ಕೆ : ಬಿಜೆಪಿಯ ಜ್ಯೋತಿ ಪಾಟೀಲ ಹಾಗೂ ಸಂತೊಷ ಚವ್ಹಾಣ ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ಸದಸ್ಯರಾಗಿದ್ದಾರೆ. ಪ್ರಸಕ್ತ ಸಾಲಿನ 4ನೇ ಅವಧಿಗೆ ಇಬ್ಬರೂ ಸದಸ್ಯರು ಕ್ರಮವಾಗಿ ಮಹಾಪೌರ ಹಾಗೂ ಉಪ ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮಹಾಪೌರ ಜ್ಯೋತಿ ಪಾಟೀಲ ಎಂಬಿಎ (ಎಚ್​ಆರ್) ಪದವೀಧರೆಯಾಗಿದ್ದರೆ, ಉಪ ಮಹಾಪೌರ ಸಂತೋಷ ಚವ್ಹಾಣ ಬಿಎಸ್ಸಿ ಇಲೆಕ್ಟ್ರಾನಿಕ್ಸ್ ಪದವೀಧರರು. 42 ವರ್ಷದ ಜ್ಯೋತಿ ಪಾಟೀಲ ಅವರ ಪತಿ ಉದ್ಯಮಿಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

47 ವರ್ಷದ ಸಂತೋಷ ಚವ್ಹಾಣ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿ ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ ನಡೆಸಿಕೊಂಡು ಬಂದವರು. 1996ರಲ್ಲಿ ಎಬಿವಿಪಿ ನಗರ ಕಾರ್ಯದರ್ಶಿಯಾಗಿ, 2000ದಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿಯಾಗಿ, 2003ರಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯರಾಗಿ, 2019ರಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಸ್ವಚ್ಛ ನಗರಕ್ಕೆ ಆದ್ಯತೆ : ಸ್ವಚ್ಛ ಹಾಗೂ ಸುಂದರ ಮಹಾನಗರ ನಿರ್ವಿುಸುವ ಜತೆಗೆ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವುದು ನನ್ನ ಆದ್ಯತೆ ಎಂದು ನೂತನ ಮಹಾಪೌರ ಜ್ಯೋತಿ ಪಾಟೀಲ ಹೇಳಿದ್ದಾರೆ.

ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿರಂತರ ನೀರು ಪೂರೈಕೆ ಯೋಜನೆಗೆ ವೇಗ ನೀಡಲಾಗುವುದು. ರಾಜ್ಯ ಸರ್ಕಾರದಿಂದ ಮಹಾನಗರ ಪಾಲಿಕೆಗೆ ಬರಬೇಕಿರುವ ಬಾಕಿ ಅನುದಾನ ತರಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಸರ್ವಪಕ್ಷ ನಿಯೋಗದೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಮಹಾಪೌರರ ಅಧಿಕಾರದ ಅವಧಿ ಹೆಚ್ಚಿಸಬೇಕೆಂಬ ನಿರ್ಗಮಿತ ಮಹಾಪೌರರಾದ ರಾಮಪ್ಪ ಬಡಿಗೇರ ಅವರ ಅಭಿಪ್ರಾಯಕ್ಕೆ ನನ್ನದೂ ಸಮ್ಮತಿ ಇದೆ ಎಂದರು.

ಅಧಿಕಾರದ ಅವಧಿ ಪೂರ್ಣಗೊಳ್ಳುವವರೆಗೂ ಮೇಯರ್ ಗೌನ್ ತೊಡುತ್ತೇನೆ ಎಂದ ಜ್ಯೋತಿ ಪಾಟೀಲ, ಈ ಹಿಂದಿನ ಮಹಾಪೌರರು ಪ್ರಾರಂಭಿಸಿದ ಫೋನ್ ಇನ್ ಕಾರ್ಯಕ್ರಮ ಮುಂದುವರಿಸುವ ಇಚ್ಛೆ ಇದೆ ಎಂದು ಹೇಳಿದರು.

ಉಪ ಮಹಾಪೌರ ಸಂತೋಷ ಚವ್ಹಾಣ ಮಾತನಾಡಿ, ಉಪ ಮಹಾಪೌರ ಸ್ಥಾನವನ್ನು ಉತ್ಸವ ಮೂರ್ತಿಯ ಸ್ಥಾನ ಎನ್ನುತ್ತಾರೆ. ಆದರೆ, ನಾನು ಉತ್ಸವ ಮೂರ್ತಿಯಾಗಿ ಕುಳಿತುಕೊಳ್ಳಲಾರೆ. ಮಹಾನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಸಂಭ್ರಮಾಚರಣೆ : ಜ್ಯೋತಿ ಪಾಟೀಲ ಮಹಾಪೌರರಾಗಿ ಹಾಗೂ ಸಂತೋಷ ಚವ್ಹಾಣ ಉಪ ಮಹಾಪೌರರಾಗಿ ಚುನಾಯಿತರಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಇಲ್ಲಿಯ ಮಹಾನಗರ ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net