ದೇಗುಲಗಳಿಗೆ ನಿರ್ಬಂಧ ಅನಿವಾರ್ಯ : ಮೇಯರ್ ಫರಿದಾಬೇಗಂ ಮನವಿ

23 TMK_Palike_Meeting
Published on

ತುಮಕೂರು: ಮಹಾಮಾರಿ ಕರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲರೂ ಸರ್ಕಾರದೊಂದಿಗೆ ಸಹಕರಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ದೇವಾಲಯ, ಜಿನ ಮಂದಿರಗಳೊಳಗೆ ಹೆಚ್ಚು ಜನ ಸೇರದಂತೆ ಕಟ್ಟುನಿಟ್ಟಿನ ಜಾಗ್ರತೆ ವಹಿಸಬೇಕಿದೆ ಎಂದು ಮೇಯರ್ ಫರಿದಾಬೇಗಂ ಮನವಿ ಮಾಡಿದರು.

ಕರೊನಾ ಹರಡದಂತೆ ತಡೆಗಟ್ಟಲು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ನಗರದ ಹಿಂದು ಹಾಗೂ ಜೈನ ಮಂದಿರಗಳ ಮುಖ್ಯಸ್ಥರು, ಅರ್ಚಕರುಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಾವು ಯಾವ ಧರ್ಮದವರಾದರೇನು? ಎಲ್ಲರಿಗೂ ಒಳ್ಳೆಯದಾಗಬೇಕೆಂದೇ ನಮ್ಮೆಲ್ಲರ ಆಶಯ. ಜಗತ್ತನ್ನೇ ಬೆಚ್ಚಿಬೀಳಿಸಿರುವ ಕರೊನಾ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ. ಈಗಾಗಲೇ ಮಸೀದಿ, ಚರ್ಚ್‌ಗಳಲ್ಲು ಪ್ರಾರ್ಥನಾ ಅವಧಿಯನ್ನು ಕಡಿತಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಕಡಿಮೆ ಅವಧಿಯಲ್ಲಿ ಪೂಜಾದಿಗಳನ್ನು ಪೂರ್ಣಗೊಳಿಸಬೇಕು. ಶುಚಿತ್ವಕ್ಕೆ ಹೆಚ್ಚು ಒತ್ತುಕೊಡುವಂತೆ ತಿಳಿಸಿದರು.

ಬುಧವಾರ ಯುಗಾದಿ ಹಬ್ಬವಿದೆ. ಈ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ಕೊಡುವ ಭಕ್ತರ ಸಂಖ್ಯೆಯೂ ಅಧಿಕವಾಗಿರುತ್ತದೆ. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದೆಡೆ ಗುಂಪಾಗಿ ಸೇರುವುದು ಅತ್ಯಂತ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪೂಜಾದಿಗಳನ್ನು ಯಾವುದೇ ಚ್ಯುತಿ ಬಾರದಂತೆ ನಡೆಸಿಕೊಂಡು ಹೋಗಲು ಹಾಗೂ ಅದೇರೀತಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಗುಂಪುಗೂಡದಂತೆ ಎಚ್ಚರವಹಿಸಬೇಕು ಎಂದರು.

ಉಪಮೇಯರ್ ಶಶಿಕಲಾ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನಯ್ಯ, ಪಾಲಿಕೆ ಸದಸ್ಯರಾದ ಜಿ.ಬಿ. ವೀಣಾ, ಎಚ್.ಎಸ್. ನಿರ್ಮಲಾ, ವಿ.ಎಸ್.ಗಿರಿಜಾ ಇತರರಿದ್ದರು.

ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಿ: ಈಗ ಗಂಭೀರ ಪರಿಸ್ಥಿತಿ ನಮ್ಮ ಮುಂದಿದೆ, ಹಿಂದೆಂದೂ ಕಾಣದ ಕಠಿಣ ಪರಿಸ್ಥಿತಿಯನ್ನು ನಾವು ಎದರಿಸುತ್ತಿದ್ದೇವೆ, ದೇವಸ್ಥಾನಗಳಲ್ಲಿ ಜನರು ಗುಂಪುಗೂಡದಂತೆ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ಎಲ್ಲ ದೇವಾಲಯಗಳಲ್ಲೂ ಭಕ್ತರು ಒಳಗೆ ಬರುವಾಗ ಹಾಗೂ ಹೊರಗೆ ಹೋಗುವಾಗ ಸಾಬೂನಿನಿಂದ ಕೈತೊಳೆದುಕೊಳ್ಳುವ ವ್ಯವಸ್ಥೆ ಮಾಡುವುದು ಸೂಕ್ತ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಸಲಹೆ ನೀಡಿದರು. ಹಿಂದು ಹಾಗೂ ಜೈನ ದೇವಾಲಯಗಳ ಅರ್ಚಕರುಗಳು, ಮುಖಂಡರುಗಳು ದೇವಾಲಯಗಳ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net