ಸಮಸ್ಯೆಗಳ ಆಗರವಾದ ಮಾಯಕೊಂಡ ನಾಡಕಚೇರಿ

Mayakonda, Nadakacherry, Problem,
Published on

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ: ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಗ್ರಾಮೀಣ ಪ್ರದೇಶ ಹೊಂದಿರುವ ಹೋಬಳಿ ಕೇಂದ್ರ ಮಾಯಕೊಂಡದ ನಾಡಕಚೇರಿ ಅವ್ಯವಸ್ಥೆಗಳ ಆಗರವಾಗಿದೆ.

ಮಾಯಕೊಂಡ ದಾವಣಗೆರೆ ತಾಲೂಕಿನಲ್ಲಿ ದೊಡ್ಡ ಹೋಬಳಿ ಕೇಂದ್ರ. 50 ಗ್ರಾಮ ಹೊಂದಿದೆ. ಅಲ್ಲದೆ, ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರ. ಇಲ್ಲಿನ ನಾಡಕಚೇರಿಗೆ ಬಹುತೇಕ ಗ್ರಾಮಗಳ ರೈತರು, ವಿದ್ಯಾರ್ಥಿಗಳು, ಜನರು ಕೆಲಸ, ಕಾರ್ಯಗಳಿಗೆ ಬರುತ್ತಾರೆ.

ಆದರೆ, ಬಸ್, ಸರ್ವರ್, ವಿದ್ಯುತ್ ಮತ್ತಿತರ ಸಮಸ್ಯೆಗಳಿಂದ ಪದೇಪದೆ ಕಚೇರಿಗೆ ಅಲೆಯುವಂತಾಗಿದೆ. ಕಚೇರಿಯ ಕುಂದುಕೊರತೆಗಳ ಬಗ್ಗೆ ಕೇಳಲು ಹಿರಿಯ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಸಂಪೂರ್ಣ ನಿರ್ಲಕ್ಷೃ ವಹಿಸಿದ್ದಾರೆ.

ಕೇಂದ್ರವಿದ್ದರೂ ವಿದ್ಯುತ್ ಸಮಸ್ಯೆ: ಮಾಯಕೊಂಡದಲ್ಲಿ ವಿದ್ಯುತ್ ಕೇಂದ್ರವಿದ್ದರೂ ವಿದ್ಯುತ್ ಪೂರೈಕೆಯಲ್ಲಿ ನಿತ್ಯ ಕೆಲ ಸಮಯ ವ್ಯತ್ಯಯವಾಗುತ್ತದೆ. ನಾಡಕಚೇರಿಯ ಹಳೆಯ ಯುಪಿಎಸ್‌ಗಳು ಸರಿಯಾಗಿಲ್ಲ. ನಾವು ಆನ್‌ಲೈನ್ ಕೆಲಸ, ಕಾರ್ಯಗಳನ್ನು ಕರೆಂಟ್ ನಂಬಿಕೊಂಡೇ ಮಾಡಬೇಕಾಗಿದೆ ಎನ್ನುತ್ತಾರೆ ಉಪ ತಹಸೀಲ್ದಾರ್ ಹಾಲೇಶ್.

ಸರ್ಕಾರಿ ಬಸ್ ಸೌಲಭ್ಯ ಕೊರತೆ: ಮಾಯಕೊಂಡ ನಾಡಕಚೇರಿ ವ್ಯಾಪ್ತಿಯ ಕಂದಗಲ್ಲು, ಮತ್ತಿ, ಶ್ಯಾಗಲೆ, ಅತ್ತಿಗೆರೆ, ಬಾಡ, ಲೋಕಿಕೆರೆ, ಗೋಪನಾಳ್, ಹಿರೇತೊಗಲೇರಿ, ರಾಮಗೊಂಡನಹಳ್ಳಿ ಮತ್ತಿತರ ದೂರದ ಗ್ರಾಮಗಳಿಂದ ಮಾಯಕೊಂಡಕ್ಕೆ ಬರಲು ನೇರ ಬಸ್‌ಗಳ ಸೌಲಭ್ಯವಿಲ್ಲ. ಮತ್ತಿ, ಶ್ಯಾಗಲೇ ಗ್ರಾಮಸ್ಥರು ದಾವಣಗೆರೆಗೆ ಹೋಗಿ ನಂತರ ಮಾಯಕೊಂಡಕ್ಕೆ ಬರಬೇಕಾದ ಸ್ಥಿತಿ ಇದೆ.

ಜನಪ್ರತಿನಿಧಿಗಳ ನಿರ್ಲಕ್ಷೃ: ಮಾಯಕೊಂಡ ವಿಧಾನಸಭಾ ಕ್ಷೇತ್ರ 1978ರಲ್ಲಿ ಉಗಮವಾಯಿತು. ಅಲ್ಲಿಂದ ಈವರೆಗೂ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾಗಿರುವ ಯಾರೊಬ್ಬರೂ ಇಲ್ಲಿನ ನಾಡಕಚೇರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಆಸಕ್ತಿ ವಹಿಸಿಲ್ಲ. ಕಂದಾಯ ಇಲಾಖೆ ಈ ಕಚೇರಿ ಸಂಪೂರ್ಣ ನಿರ್ಲಕ್ಷೃ ಮಾಡಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶ.

ಮಾಯಕೊಂಡ ನಾಡಕಚೇರಿಗೆ ಆನ್‌ಲೈನ್ ಕಾರ್ಯಗಳಿಗೆ ವಿದ್ಯುತ್, ಯುಪಿಎಸ್ ತುರ್ತು ಅಗತ್ಯವಿದೆ. ಯುಪಿಎಸ್‌ಗಳು ಕೆಲವು ತಿಂಗಳ ಹಿಂದೆ ಕೆಟ್ಟು ನಿಂತಿವೆ. ಹೊಸ ಯುಪಿಎಸ್‌ಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ.
l ಹಾಲೇಶಪ್ಪ, ಉಪತಹಸೀಲ್ದಾರ್, ಮಾಯಕೊಂಡ.

ಮಳಲ್ಕೆರೆ ಗ್ರಾಮದಿಂದ ವಂಶವೃಕ್ಷಕ್ಕಾಗಿ ಅರ್ಜಿ ಸಲ್ಲಿಸಲು ಮೂರು ದಿನಗಳಿಂದ ಮಾಯಕೊಂಡ ನಾಡಕಚೇರಿಗೆ ಅಲೆದಾಡುತ್ತಿದ್ದೇನೆ. ವಿದ್ಯುತ್ ಸಮಸ್ಯೆಯಿಂದಾಗಿ ಮೂರ್ನಾಲ್ಕು ದಿನ ಕಚೇರಿಗೆ ಬಂದು ಕೆಲಸ ಆಗದೆ ವಾಪಸ್ ಊರಿಗೆ ಹೋಗಬೇಕಾಯಿತು.
l ಶ್ರೀನಿವಾಸ್, ಮಳಲ್ಕೆರೆ, ದಾವಣಗೆರೆ ತಾಲೂಕು.

ಮಾಯಕೊಂಡ ನಾಡಕಚೇರಿ ವ್ಯಾಪ್ತಿಯಲ್ಲಿ 45ರಿಂದ 50 ಹಳ್ಳಿಗಳಿದ್ದು, ಸಾರ್ವಜನಿಕರು ನಿತ್ಯವೂ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬರುತ್ತಾರೆ. ಇಲ್ಲಿನ ಅವ್ಯವಸ್ಥೆ ಕಂಡು ವಾಪಸ್ ಹೋಗುತ್ತಾರೆ. ಸಾರ್ವಜನಿಕರು ದಾವಣಗೆರೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ನಾಡಕಚೇರಿಗೆ ಬಿ ಗ್ರೇಡ್ ತಹಸೀಲ್ದಾರ್ ನಿಯೋಜನೆ ಮಾಡಬೇಕು.
l ಎನ್.ಬಿ. ಮಹೇಶ್, ಸದಸ್ಯರು, ಹುಚ್ಚವ್ವನಹಳ್ಳಿ ಗ್ರಾಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net