

ಮಾಯಕೊಂಡ: ಹೋಬಳಿಯ ಹಲವು ಗ್ರಾಮಗಳಲ್ಲಿ ಮಂಗಳವಾರ ಬೆಳಗಿನ ಜಾವ ಹಾಗೂ ಬುಧವಾರ ರಾತ್ರಿ, ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ವಿವಿಧ ಗ್ರಾಮಗಳ ಮೆಕ್ಕೆಜೋಳದ ಜಮೀನುಗಳು ಜಲಾವೃತಗೊಂಡಿವೆ.
ಹೋಬಳಿಯ ಮಾಯಕೊಂಡ, ಹುಚ್ಚವನ್ನಹಳ್ಳಿ, ಎಚ್.ಬಸವಾಪುರ, ಇಂಡಿಸಕಟ್ಟೆ, ಎಚ್. ರಾಂಪುರ, ಹೆದ್ನೆ, ದಿಂಡದಹಳ್ಳಿ, ದೊಡ್ಡ ಮಾಗಡಿ ಮತ್ತಿತರ ಗ್ರಾಮಗಳಲ್ಲಿ ಮೆಕ್ಕೆಜೋಳದ ಜಮೀನುಗಳಲ್ಲಿ ನೀರು ನಿಂತಿವೆ. ಹಳ್ಳಗಳು ತುಂಬಿ ಹರಿಯುತ್ತಿವೆ.
ಬಿರುಮಳೆಯಿಂದಾಗಿ ಮಾಯಕೊಂಡ ರೈಲು ನಿಲ್ದಾಣದ ಸಮೀಪದ ಜಮೀನಿನಲ್ಲಿ ಕಾಳು ಕಟ್ಟುವ ಹಂತದಲ್ಲಿದ್ದ ಮೆಕ್ಕೆಜೋಳ ಜಲಾವೃತಗೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಹೋಬಳಿಯ ಅನೇಕ ಗ್ರಾಮಗಳ ಹಳ್ಳ-ಕೊಳ್ಳ, ಕೆರೆಕಟ್ಟೆಗಳು ತುಂಬಿದರೆ, ಕೊಳವೆಬಾವಿಗಳ ಅಂತರ್ಜಲ ವೃದ್ಧಿಸುವ ಸಮಾಧಾನ ತರಿಸಿದರೆ, ಇನ್ನೊಂದೆಡೆ ಫಸಲು ಹಾಳಾಗುವ ಆತಂಕ ಎದುರಾಗಿದೆ.
ಕಳೆದೊಂದು ತಿಂಗಳಿಂದ ಸುರಿದ ಜಿಟಿ ಮಳೆಗೆ ಮಾಯಕೊಂಡ ಹೋಬಳಿಯ ಹಲವು ಗ್ರಾಮಗಳಲ್ಲಿ ತಡವಾಗಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಫಸಲು ಹಾಳಾಗಿತ್ತು. ಮತ್ತೊಮ್ಮೆ ಜಮೀನು ಹದಗೊಳಿಸಿ, ರಾಗಿ, ಅಲಸಂದೆ, ಅವರೆ ಬಿತ್ತನೆಗೆ ಮುಂದಾಗುವ ಹಂತದಲ್ಲೇ ಮಳೆ ಸಮಸ್ಯೆ ತಂದಿಟ್ಟಿದೆ.