ಮಾಯಕೊಂಡದಲ್ಲಿ ಮೆಕ್ಕೆಜೋಳ ಬಿತ್ತನೆ ಚುರುಕು

Mayakonda, Maize, Sow, Start,
Published on

ಮಾಯಕೊಂಡ: ಮಾಯಕೊಂಡ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಮಂಗಳವಾರದಿಂದ ಚುರುಕುಗೊಂಡಿದೆ.
ಬಿತ್ತನೆಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಂಡಿದ್ದ ಈ ಭಾಗದ ರೈತರು ಮಳೆಗಾಗಿ ಕಾಯುತ್ತಿದ್ದರು.

ಸೋಮವಾರ ಸಂಜೆ ಸಾಧಾರಣ ಮಳೆ ಸುರಿದ ಕಾರಣ ಮಾಯಕೊಂಡ, ಹುಚ್ಚವ್ವನಹಳ್ಳಿ, ವಡ್ಡರಹಟ್ಟಿ, ಎಚ್.ರಾಂಪುರ, ಎಚ್. ಬಸವಾಪುರ, ಹಿಂಡಿಸಕಟ್ಟೆ ಗ್ರಾಮಗಳಲ್ಲಿ ರೈತರು ಮೆಕ್ಕೆಜೋಳ ಬಿತ್ತನೆ ಕಾರ್ಯಕ್ಕೆ ಮುಂದಾದರು.

ಮಳೆಗಾಲ ಪ್ರಾರಂಭವಾಗಿ ಒಂದೂವರೆ ತಿಂಗಳಾದರೂ ಈ ಭಾಗದ ಗ್ರಾಮಗಳಲ್ಲಿ ಇಂದಿಗೂ ಹದ ಮಳೆ ಆಗದ ಕಾರಣಕ್ಕೆ ಬಿತ್ತನೆ ವಿಳಂಬವಾಗಿತ್ತು ಎನ್ನುತ್ತಾರೆ ರೈತರು.

ರೈತರು ಹದ ಮಳೆ ನೋಡಿಕೊಂಡು ಮೆಕ್ಕೆಜೋಳ ಬಿತ್ತನೆ ಮಾಡಬೇಕು. ಅಕ್ಕಡಿ ಬೆಳೆಯಾಗಿ ತೊಗರಿ ಬಿತ್ತನೆ ಮಾಡಲು ಸಮಯವಿದೆ. ತೊಗರಿ ಬೆಳೆದರೆ ಭೂಮಿಯ ಫಲವತ್ತತೆ ವೃದ್ಧಿಯ ಜತೆಗೆ ಇಳುವರಿ ಕೂಡ ಹೆಚ್ಚಾಗಲಿದೆ. ಆನಗೋಡು ಹೋಬಳಿಯ ಹಲವು ಗ್ರಾಮಗಳಲ್ಲಿ ತೊಗರಿ ಬೀಜದ ಸಸಿಗಳನ್ನು ಸ್ವತಃ ರೈತರೇ ತಯಾರಿಸಿಕೊಂಡು ನಾಟಿ ಮಾಡಿದ್ದಾರೆ.
l ಡಿ.ಎಂ. ಶ್ರೀಧರ್ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ

ಕಳೆದ ಹಾಗೂ ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಮಳೆಯಾಗದ ಕಾರಣ ಮುಂಗಾರು ಹಂಗಾಮಿನ ಬೆಳೆಗಳು ಹಾಳಾಗಿವೆ. ಸರ್ಕಾರ ದಾವಣಗೆರೆಯನ್ನು ಬರಪೀಡಿತ ತಾಲೂಕೆಂದು ಘೋಷಿಸಿದೆ. ಆನಗೋಡು, ಮಾಯಕೊಂಡ, ಅಣಜಿ ಹೋಬಳಿ ರೈತರು ಮೆಕ್ಕೆಜೋಳ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಖರ್ಚು ಮಾಡಿದ ಹಣ ಸಹ ಬಂದಿಲ್ಲ. ಆದ್ದರಿಂದ ತಕ್ಷಣ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ರೈತರ ಸಾಲ ಮನ್ನಾ ಮಾಡಿ, ನೆರವಿಗೆ ಧಾವಿಸಬೇಕು.
l ಹುಚ್ಚವ್ವನಹಳ್ಳಿ ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ(ಪ್ರೊ. ನಂಜುಂಡಸ್ವಾಮಿ ಬಣ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net