ಧರ್ಮಸ್ಥಳ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ

Mayakonda, Jnanavikas, Anniversary,
Published on

ಮಾಯಕೊಂಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ತಿಳಿಸಿದರು.

ದಾವಣಗೆರೆ ಗ್ರಾಮಾಂತರ ಯೋಜನಾ ವ್ಯಾಪ್ತಿಯ ಕೊಡಗನೂರು ವಲಯ ನಿರ್ಥಡಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಶ್ರಮ ಜ್ಞಾನವಿಕಾಸ ಕೇಂದ್ರದಲ್ಲಿ ಯೋಜನೆಯ ವಾರ್ಷಿಕೋತ್ಸವ ಉದ್ಘಾಟಿಸಿದರು.

ಸಂಸ್ಥೆಯು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೊಸ ವಿಚಾರಗಳನ್ನು ತಿಳಿಸಿಕೊಡಲು ದಾರಿ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು.

ಶಿಕ್ಷಕ ಸಂತೋಷ್ ಮಾತನಾಡಿ, ಮಕ್ಕಳ ಶಿಕ್ಷಣ ಜತೆಗೆ ಸಂಸ್ಕೃತಿ, ಸಂಸ್ಕಾರ ನೀಡಿ ಅವರ ಭವಿಷ್ಯ ರೂಪಿಸುವುದು ತಾಯಂದಿರ ಜವಾಬ್ದಾರಿ. ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ಕಾರ್ಯಪ್ರವೃತ್ತರಾಗಬೇಕು ಎಂದರು.

ಜ್ಞಾನವಿಕಾಸ ಕೇಂದ್ರದ ಮೇಲ್ವಿಚಾರಕಿ ಚಂದ್ರಕಲಾ ಮಾತನಾಡಿ, ಜ್ಞಾನವಿಕಾಸ ಕೇಂದ್ರಗಳ ಮೂಲಕ ಪ್ರತಿ ತಿಂಗಳಿಗೆ ಹೊಸ ವಿಚಾರಗಳನ್ನು ತಿಳಿದುಕೊಂಡು ನಿಮ್ಮ ಕುಟುಂಬದಲ್ಲಿ ಅನುಷ್ಠಾನಗೊಳಿಸಬೇಕು. ವಾರದ ಸಭೆ ಸಮರ್ಪಕವಾಗಿ ಮಾಡಿ ಪ್ರಗತಿನಿಧಿ ಬಳಸಿಕೊಂಡು ಸ್ವ ಉದ್ಯೋಗ ಮಾಡಬೇಕು ಎಂದರು.

ಒಕ್ಕೂಟದ ಅಧ್ಯಕ್ಷೆ ಪಾರ್ವತಮ್ಮ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರತಿಭಾ ಪ್ರಾಸ್ತಾವಿಕ ಮಾತನಾಡಿದರು. ಸೇವಾ ಪ್ರತಿನಿಧಿ ನೀಲಮ್ಮ ಸ್ವಾಗತಿಸಿದರು. ಕೇಂದ್ರದ ಸದಸ್ಯ ಸವಿತಾ ವಂದಿಸಿದರು. ವಾರ್ಷಿಕೋತ್ಸವದ ನಿಮಿತ್ತ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಜನಾ ಕಾರ್ಯಕ್ರಮ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net