ಮೆಕ್ಕೆಜೋಳ ದರ ಕುಸಿತ

MYK MAIZE DAEA KUSITA 12 (2)
Published on

ಎಸ್.ಎಂ. ಮಂಜುನಾಥ ಮಾಯಕೊಂಡ
ಪ್ರಕೃತಿಯ ಕಣ್ಣಾಮುಚ್ಚಾಲೆ ನಡುವೆ ಭೂಮಿಗೆ ಹಣ ಸುರಿದು ಮುಗಿಲು ನೋಡುವ ರೈತರು, ಅಷ್ಟೋ-ಇಷ್ಟೋ ಬೆಳೆ ಕೈಗೆ ಬಂದಿದೆ ಎಂದು ನಿಟ್ಟುಸಿರು ಬಿಟ್ಟರೆ, ದರ ಕುಸಿತ ಅವರ ಆಸೆಗೆ ತಣ್ಣೀರೆರಚಿದೆ.

ದಾವಣಗೆರೆ ಜಿಲ್ಲೆಯ ರೈತರ ಪಾಲಿಗೆ ಮೆಕ್ಕೆಜೋಳ ಪ್ರಮುಖ ಬೆಳೆ. ರೈತರ ಬದುಕು ಇಳುವರಿ ಹಾಗೂ ದರದ ಮೇಲೆ ನಿಂತಿದೆ.

ಪ್ರಸಕ್ತ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಕ್ವಿಂಟಲ್‌ಗೆ 1900 ರೂ. ಇದ್ದ ಮೆಕ್ಕೆಜೋಳದ ದರವೀಗ 1100 ರಿಂದ 1200 ರೂ. ಗೆ ಇಳಿದಿದೆ.

ಕಳೆದ ವರ್ಷ ಜನವರಿ, ಫೆಬ್ರವರಿ ವೇಳೆಗೆ ಮೆಕ್ಕೆಜೋಳ ಬೆಲೆ 2 ಸಾವಿರ ಗಡಿ ದಾಟಿದ್ದರಿಂದ ಈ ಬಾರಿಯೂ ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ದಿನದಿಂದ ದಿನಕ್ಕೆ ದರ ಕುಸಿಯುತ್ತಿದ್ದು, ಖರೀದಿದಾರರು ಖರೀದಿಗೆ ಮುಂದೆ ಬರುತ್ತಿಲ್ಲ. ಇತ್ತ ರೈತರು ಕಣಗಳಲ್ಲೇ ರಾಶಿ ಹಾಕಿಕೊಂಡು ಕಾಯುವಂತಾಗಿದೆ. ಬೆಳೆಯಲು ಮಾಡಿದ್ದ ಖರ್ಚಾದರೂ ಕೈಸೇರಿದರೆ ಸಾಕು ಎಂಬಂತಾಗಿದೆ ಮೆಕ್ಕೆಜೋಳ ಬೆಳೆಗಾರರ ಸ್ಥಿತಿ.

ಶೀಘ್ರ ಖರೀದಿ ಕೇಂದ್ರ ತೆರೆಯಲಿ: ಕೆಲ ತಿಂಗಳ ಹಿಂದೆ ಮೆಕ್ಕೆಜೋಳ ಖರೀದಿಗೆ ಸರ್ಕಾರ ದರ ನಿಗದಿ ಮಾಡಿತ್ತು. ಆದರೆ ಮೆಕ್ಕೆಜೋಳ ಕಟಾವು ಮಾಡಿ ನಾಲ್ಕು ತಿಂಗಳು ಕಳೆದರೂ ಖರೀದಿಕೇಂದ್ರ ತೆರೆದಿಲ್ಲ. ಈಗಲಾದರೂ ಸರ್ಕಾರ ಶೀಘ್ರ ಮೆಕ್ಕೆಜೋಳ ಬೆಳೆಗಾರರ ನೆರವಿಗೆ ಮುಂದಾಗಬೇಕೆಂಬುದು ರೈತರ ಒತ್ತಾಯವಾಗಿದೆ.

ಮೆಕ್ಕೆಜೋಳ ಜಿಲ್ಲೆಯ ರೈತರ ಮುಖ್ಯ ಬೆಳೆ. ಗಣನೀಯವಾಗಿ ದರ ಕುಸಿದಿದ್ದು, ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ.
> ಪ್ರಭುಸ್ವಾಮಿ ಎಪಿಎಂಸಿ ಕಾರ್ಯದರ್ಶಿ

ದರಕುಸಿತದಿಂದ ರೈತರು ಸಂಕಷ್ಟದಲ್ಲಿರದ್ದರೂ ಸರ್ಕಾರ ಖರೀದಿ ಕೇಂದ್ರ ತೆರೆಯದೇ ಮೀನಮೇಷ ಎಣಿಸುತ್ತಿದೆ. ರೈತರ ಮೇಲಿನ ಅಸಡ್ಡೆ ತೋರುತ್ತಿದೆ. ಶೀಘ್ರವೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದಿದ್ದಲ್ಲಿ ಹೋರಾಟ ನಡೆಸಲಾಗುವುದು.
> ಹುಚ್ಚವ್ವನಹಳ್ಳಿ ಗಣೇಶ್, ಪ್ರಕಾಶ್, ಗೌಡ್ರ ಅಶೋಕ ರೈತ ಮುಖಂಡರು

ಕಳೆದ ವರ್ಷ ಮೆಕ್ಕೆಜೋಳ ಮಾರಾಟ ಮಾಡಿದ ನಂತರ ದರ ಏರಿಕೆಯಾಗಿತ್ತು. ಈ ಬಾರಿ ರೇಟು ಹೆಚ್ಚಾಗುತ್ತದೆಂದು ಇಟ್ಟುಕೊಂಡರೆ ದರ ಪಾತಾಳ ಕಂಡಿದೆ. ಸಾಲ ನೀಡಿದವರಿಗೆ ಏನು ಹೇಳಬೇಕೆಂದು ತೋರುತ್ತಿಲ್ಲ. ಸರ್ಕಾರ ಖರೀದಿ ಕೇಂದ್ರ ತೆರೆದು ನಮ್ಮನ್ನು ಕಾಪಾಡಬೇಕು.
ಜಗದೀಶ್, ನಟರಾಜ್, ಅಣಬೇರು ಅನಿಲ್, ಆನಗೋಡು ಬಸಣ್ಣ, ರವಿ, ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net