

ಮಾಯಕೊಂಡ: ಹೋಬಳಿಗೆ ಸಮರ್ಪಕ ವಿದ್ಯುತ್ ಸರಬರಾಜಿಗೆ ಒತ್ತಾಯಿಸಿ ಮಾಯಕೊಂಡ ಬೆಸ್ಕಾಂ ಕಚೇರಿ ಮುಂಭಾಗ ರೈತರು ಶುಕ್ರವಾರ ಪ್ರತಿಭಟನೆ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ ಮಾತನಾಡಿ, ಮಾಯಕೊಂಡ ಬೆಸ್ಕಾಂ ವ್ಯಾಪ್ತಿಗೆ ಸೇರಿದ ಎಲ್ಲ ಗ್ರಾಮಗಳ ಕೃಷಿ ಪಂಪ್ಸೆಟ್ಗಳಿಗೆ ಹಾಗೂ ಮನೆಗಳಿಗೆ ನಿರಂತರ ಜ್ಯೋತಿ ಮತ್ತು ಐಪಿ ವಿದ್ಯುತ್ ಸರಿಯಾಗಿ ಪೂರೈಸುತ್ತಿಲ್ಲ ಎಂದು ದೂರಿದರು.
ಪ್ರತಿದಿನ 5-6 ಗಂಟೆ ಲೋಡ್ ಶೆಡ್ಡಿಂಗ್ ಮತ್ತು ಲೈನ್ ಟ್ರಬಲ್ ನೆಪವೊಡ್ಡಿ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ಇದರಿಂದ ಪಂಪ್ಸೆಟ್ಗಳು ಸುಟ್ಟು ಹೋಗಿದ್ದು, ಇದಕ್ಕೆ ಬೆಸ್ಕಾಂ ಅಧಿಕಾರಿಗಳೇ ನೇರ ಕಾರಣ ಎಂದು ಕಿಡಿ ಕಾರಿದರು.
ಈಗಾಗಲೇ 30 ರಿಂದ 35 ಡಿಗ್ರಿ ಉಷ್ಣಾಂಶದಿಂದ ತೋಟಗಾರಿಕೆ ಬೆಳೆಗಳು ಒಣಗಿವೆ. ಪ್ರತಿದಿನ ಬೆಳೆಗಳಿಗೆ ನೀರು ನೀಡಲು ಸಮರ್ಪಕ ವಿದ್ಯುತ್ ಅನಿವಾರ್ಯ. ಅಧಿಕಾರಿಗಳು ಯಾವುದೇ ಕಾರಣ ನೀಡದೇ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ರೈತ ಹುಚ್ಚವ್ವನಹಳ್ಳಿ ಜಿ.ಎಂ.ಕಲ್ಲೇಶ್ ಮಾತನಾಡಿ, ಪದೇ ಪದೆ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಮನೆಗಳಿಗೆ ಪೂರೈಕೆಯಾಗುವ ನಿರಂತರ ವಿದ್ಯುತ್ಗೂ ಸಮಯವಿಲ್ಲ. ಹೀಗೇ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಮಳಲ್ಕೆರೆ ಸಿದ್ದೇಶ್ ಮಾತನಾಡಿ, ನಿರಂತರ 7 ಗಂಟೆ ವಿದ್ಯುತ್ ಪೂರೈಸಲು ಸೂಚಿಸಿದ್ದರೂ ಬೆಸ್ಕಾಂ ಪಾಲಿಸುತ್ತಿಲ್ಲ ಎಂದರು.
ಬೆಸ್ಕಾಂ ಎಇಇ ಕೆ.ಎನ್.ತೀರ್ಥೇಶ್ ಮಾತನಾಡಿ, ಎಲ್ಲ ಫೀಡರ್ಗಳು ಓವರ್ ಲೋಡ್ ಆಗಿವೆ. ವಾಣಿಜ್ಯ ಬೆಳೆಗಳ ಪ್ರದೇಶ ಜಾಸ್ತಿಯಾಗುತ್ತಿದೆ. ಈ ಬಾರಿ ಮಾಯಕೊಂಡ, ಆನಗೋಡು ಹೋಬಳಿಯಲ್ಲಿ 2700 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಒಂದೆರಡು ದಿನಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ರೈತರು ಸಹಕರಿಸುವಂತೆ ಕೋರಿದರು.
ಕಬ್ಬೂರು ಹಾಗೂ ತೋಳಹುಣಸೆ ಗ್ರಾಮದಲ್ಲಿ ನೂತನ ಬೆಸ್ಕಾಂ ಪವರ್ ಸ್ಟೇಷನ್ ನಿರ್ವಿುಸಲು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಅದು ಸಿಕ್ಕ ನಂತರ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು ಎಂದರು.
ಪ್ರಗತಿಪರ ರೈತ ಜಿ.ಎಂ.ಕಲ್ಲೇಶ್, ಮಲ್ಲಿಕಾರ್ಜುನ್, ಸಿದ್ದೇಶ್, ಮರುಳಸಿದ್ದಪ್ಪ, ದೇವರಾಜ್, ರಮೇಶ್, ಹಾಲೇಶಪ್ಪ, ಶಶಿಧರ್, ಪರಶುರಾಮ್ ರವಿಕುಮಾರ್, ನಾಗರಾಜ್ ಇತರರಿದ್ದರು.