

ರಾಯಬಾಗ: ಶಕ್ತಿ ದೇವತೆ ಚಿಂಚಲಿ ಮಾಯಕ್ಕದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಚಿಂಚಲಿ ಪಟ್ಟಣದ ಗೀತಾ ಮೋಹನ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಯಕ್ಕದೇವಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನೆರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಜಾತ್ರಾ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನದಿ ದಂಡೆಯಲ್ಲಿರುವ ರೈತರ ಮೋಟರ್, ಕೇಬಲ್ ಕಳ್ಳತನ ಆಗುತ್ತಿದ್ದರೂ ಕುಡಚಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆಗೆ ಹಿಡಕಲ್ ಡ್ಯಾಂದಿಂದ ನೀರು ಬಿಡುಗಡೆಗೊಳಿಸಲಾಗುವುದು. ಪೊಲೀಸರ ಸಹಾಯದೊಂದಿಗೆ ಚಿಂಚಲಿವರೆಗೆ ನೀರು ತಲುಪಿಸಲು ನೀರಾವರಿ ಇಲಾಖೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಮಾತನಾಡಿ, ಜಾತ್ರೆಗೆ ನೀರಿನ ಟ್ಯಾಂಕರ್ ಅಗತ್ಯವಿದ್ದಲ್ಲಿ ಒದಗಿಸಲಾಗುವುದು. ಪಟ್ಟಣ ಪಂಚಾಯಿತಿ ಅವರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಭಕ್ತರಿಗೆ ಶೌಚಗೃಹ ವ್ಯವಸ್ಥೆ ಮಾಡಬೇಕೆಂದರು.
ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಮಾತನಾಡಿ, ಜಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಪಪಂಯಿಂದ ಪಟ್ಟಣದ ವಿವಿಧೆಡೆ, ಜಾತ್ರೆಯ ಅಂಗಡಿಗಳಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸುವಂತೆ ಅಂಗಡಿಕಾರರಿಗೆ ಸೂಚಿಸಬೇಕು ಎಂದು ತಿಳಿಸಿದರು.
ಜಾತ್ರೆಯಲ್ಲಿ ಕಳಪೆ ಭಂಡಾರ ಮಾರಾಟ ಜಪ್ತಿ ಮಾಡುವಂತೆ ತಹಸೀಲ್ದಾರ್ ಸುರೇಶ ಮುಂಜೆ ಆರೋಗ್ಯ ಇಲಾಖೆಗೆ ಸೂಚಿಸಿದರು. 3 ದಿನ ಮದ್ಯ ಮಾರಾಟ ಬಂದ್ ಮಾಡಬೇಕು. ಪಶು ವೈದ್ಯರು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜಾತ್ರೆಯಲ್ಲಿ ಭಕ್ತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ವೈದ್ಯರು ಮತ್ತು ಸಿಬ್ಬಂದಿ ನೇಮಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಜಿತೇಂದ್ರ ಜಾಧವ, ಸಿಪಿಐ ಬಿ.ಎಸ್.ಮಂಟೂರ, ಪಪಂ ಅಧ್ಯಕ್ಷೆ ಕವಿತಾ ಯಡ್ರಾಂವಿ, ಮುಖ್ಯಾಧಿಕಾರಿ ವೆಂಕಟೇಶ ಬಳ್ಳಾರಿ, ತಾಲೂಕು ಅಧಿಕಾರಿಗಳಾದ ವಿನೋದ ಮಾವರಕರ, ಆರ್.ಬಿ.ಮನವಡ್ಡರ, ಕಿರಣ ಚಂದರಗಿ, ಎಂ.ಬಿ.ಪಾಟೀಲ, ಉಮೇಶ ಪ್ರಧಾನಿ, ಶಂಕರಗೌಡ ಪಾಟೀಲ, ಭಾರತಿ ಕಾಂಬಳೆ, ಎಚ್.ಎಲ್.ಪೂಜಾರಿ ಇತರರಿದ್ದರು.