

ಕಳೆಗೆ ಬೇಸತ್ತ ಬೆಳೆಗಾರರು l ಮುಂಗಾರು ತಡವಾಗಿದ್ದೇ ಕಾರಣ
ಮಾಯಕೊಂಡ: ಮೆಕ್ಕೆಜೋಳದ ಗರಿ ಹೋಲುವ ಮತ್ತು ಮೈತುಂಬ ಬಿಳಿ ಮುಳ್ಳು ತುಂಬಿರುವ ಮುಳ್ಳು ಸಜ್ಜೆ ಕಳೆಗೆ ಮೆಕ್ಕೆಜೋಳ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ.
ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳ ಗ್ರಾಮಗಳ ಜಮೀನಿನಲ್ಲಿ ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿದ ಮೆಕ್ಕೆಜೋಳದಲ್ಲಿ ಮುಳ್ಳು ಸಜ್ಜೆ ಎತ್ತರವಾಗಿ ಬೆಳೆದು ನಿಂತಿದೆ. ಮುಂಗಾರು ತಡವಾಗಿದ್ದೇ ಇದಕ್ಕೆ ಕಾರಣ.
ಮಾಯಕೊಂಡ ಹೋಬಳಿಯ ಹಲವು ಗ್ರಾಮಗಳಲ್ಲಿ ಮೆಕ್ಕೆಜೋಳ ತೆನೆ ಹುಟ್ಟಿ ಮೇಲೆ ಬರುವುದಕ್ಕಿಂತ ಮೊದಲೇ ಮುಳ್ಳು ಸಜ್ಜೆ ಕಳೆ ಮೆಣಸಿನ ಮಡಿಯಂತೆ ಬೆಳೆದಿದೆ. ಇದಕ್ಕೆ ಹೆಚ್ಚು ಶಕ್ತಿಯುಳ್ಳ ಕಳೆನಾಶಕ ಸಿಂಪಡಣೆ ಮಾಡಿದರೂ ಈ ಹುಲ್ಲು ಸಾಯುವುದಿಲ್ಲ.
ಕಿತ್ತು ಹೊರಗೆ ಹಾಕಿದರೆ ಮಾತ್ರ ಮೆಕ್ಕೆಜೋಳ ಬೆಳೆಯಬಹುದು. ಹೊಲದಲ್ಲಿ ಹಾಗೆ ಬಿಟ್ಟರೆ ಜೋಳಕ್ಕಿಂತ ಎತ್ತರ ಬೆಳೆದು ಬೆಳೆ ಹಾಳು ಮಾಡುತ್ತದೆ ಎನ್ನುತ್ತಾರೆ ಕೃಷಿಕರು.
ಕಳೆ ಕೀಳಲು ದುಬಾರಿ ಕೂಲಿ: ಮುಳ್ಳು ಸಜ್ಜೆ ಕಳೆ ಕೀಳಲು ಕೂಲಿಕಾರರ ಸಮಸ್ಯೆ ಜತೆಗೆ ಕೂಲಿಯ ದರ ಹೆಚ್ಚಳವಾಗಿದೆ. ಕಳೆ ಕೀಳಲು ಪ್ರತಿ ಎಕರೆಗೆ ಒಂದೂವರೆ ಸಾವಿರದಿಂದ ಎರಡು ಸಾವಿರ ರೂ. ಕೇಳುತ್ತಾರೆ. ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರಗಳು ಮುಳ್ಳು ಸಜ್ಜೆ ನಾಶಕ ಸಂಶೋಧಿಸಿ ಮಾರುಕಟ್ಟೆಗೆ ಬಿಟ್ಟರೆ ಮುಂದಿನ ದಿನಮಾನಗಳಲ್ಲಿ ಅನುಕೂಲವಾಗುತ್ತದೆ ಎನ್ನುತ್ತಾರೆ ಮಾಯಕೊಂಡ ಹಾಗೂ ಆನಗೋಡು ಭಾಗದ ರೈತರು.
ರೈತರು ಬಹು ಬೆಳೆ ಪದ್ಧತಿ ಅನುಸರಿಸುವ ಜತೆಗೆ ದ್ವಿದಳ ಧಾನ್ಯಗಳು ಮತ್ತು ಸಿರಿಧಾನ್ಯ ಬಿತ್ತನೆ ಮಾಡಿದರೆ ಮುಳ್ಳುಸಜ್ಜೆ ಕಳೆ ನಿರ್ಮೂಲನೆ ಮಾಡಬಹುದು. ಕೃಷಿ ಇಲಾಖೆ, ವಿಶ್ವವಿದ್ಯಾಲಯಗಳು ಕಳೆನಾಶಕ ಕುರಿತು ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಮುಳ್ಳುಸಜ್ಜೆ ಕಳೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯದಲ್ಲಿ ಕಳೆನಾಶಕ ಬರುವ ನಿರೀಕ್ಷೆ ಇದೆ.
l ಡಿ.ಎಂ. ಶ್ರೀಧರ್ ಮೂರ್ತಿ, ಕೃಷಿ ಸಹಾಯಕ ನಿರ್ದೇಶಕ.