ಜೀವಿತಾವಧಿ ಒಳ್ಳೆಯ ಕೆಲಸಕ್ಕೆ ವಿನಿಯೋಗವಾಗಲಿ

23sdp4a
Published on

ಸಿದ್ದಾಪುರ: ಜೀವಿತಾವಧಿಯ ಸಮಯವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬೇಕು ಎಂದು ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.

ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ನಾಲ್ಕನೇ ಚಾತುರ್ಮಾಸ್ಯ ಆಚರಿಸುತ್ತಿರುವ ಶ್ರೀಗಳು ಹೊನ್ನಾವರ ತಾಲೂಕಿನ ಹಡಿನಬಾಳು ಗ್ರಾಮದ ಭಕ್ತರಿಂದ ಸಂಪೂರ್ಣ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಸಮಯ ವ್ಯರ್ಥ ಮಾಡದೆ ಸತ್ಯವಾದ ಮಾರ್ಗದಲ್ಲಿ ನಡೆಯಬೇಕು ಮತ್ತು ಪರೋಪಕಾರದಿಂದ ಕೂಡಿದ ಜೀವನದ ದಾರಿ ನಮ್ಮದಾಗಬೇಕು. ಹಗಲು ಮತ್ತು ರಾತ್ರಿಗಳಂತೆ ನಮ್ಮ ಜೀವನವೂ ಸಹ ಕಳೆದು ಹೋಗುತ್ತದೆ. ಸಮಯವು ಕಳೆದ ನಂತರ ಚಿಂತಿಸಿದರೆ ಫಲ ದೊರಕುವುದಿಲ್ಲ. ಹಾಗಾಗಿ ನಾವು ಹೆಚ್ಚು ಸಮಯವನ್ನು ಧರ್ಮದ ಆಚರಣೆಯಲ್ಲಿ ಕಳೆಯಬೇಕು.

ಭೌತಿಕ ವಸ್ತುಗಳ ಸಂಪಾದನೆಯಲ್ಲಿ ಹೆಚ್ಚು ಮನಸ್ಸನ್ನು ಇಡದೆ ಪಾರಮಾರ್ಥಿಕ ಜೀವನ ನಡೆಸಬೇಕು. ಕೊನೆಯಲ್ಲಿ ನಮ್ಮ ಜತೆಯಲ್ಲಿ ಬರುವುದು ಸತ್ಯ ಮತ್ತು ಧರ್ಮಗಳು ಮಾತ್ರ. ಹಾಗಾಗಿ ಸತ್ಯದಿಂದ ಕೂಡಿದ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಇಹ ಮತ್ತು ಪರದಲ್ಲಿ ಸುಖ ಹೊಂದಬಹುದು ಎಂದು ಹೇಳಿ ಕಾಲನ ಕಥೆಯ ದೃಷ್ಟಾಂತದ ಮೂಲಕ ವಿವರಿಸಿದರು. ನಂತರ ಎಲ್ಲ ಭಕ್ತರಿಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಶ್ರೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ಗನೂರು, ಎಸ್.ಎನ್. ಹೆಗಡೆ ಹಡಿನಬಾಳು. ರಘುಪತಿ ಹೆಗಡೆ ಹಾಲೆ ಗೌರಿ, ವಿನಾಯಕ ಭಟ್ ನೆಲೆಮಾವು, ಗ್ರಾಮ ಪ್ರತಿನಿಧಿಗಳು, ಶಿಷ್ಯವೃಂದದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net