ಇನ್ನೊಬ್ಬರ ಬದುಕಿಗೆ ಮಾರ್ಗದರ್ಶಕರಾಗಿ ಬೆಳೆಯಲಿ

13kmt1_Holegadde
Published on

ಕುಮಟಾ: ವಿದ್ಯಾರ್ಥಿ ಜೀವನದಲ್ಲಿ ಕೀಳರಿಮೆ, ಹಿಂಜರಿಕೆ ಸ್ವಭಾವ ತ್ಯಜಿಸಿ ಧೈರ್ಯದಿಂದ ಮುನ್ನಡೆಯಬೇಕು. ಅಂಕಗಳು ಸಾಧನೆಗೆ ಮೆಟ್ಟಿಲಾದರೆ, ಇನ್ನೊಬ್ಬರ ಬದುಕಿಗೂ ಮಾರ್ಗದರ್ಶಕರಾಗುವಂತೆ ಬೆಳೆಯುವುದು ಇಡೀ ಸಮಾಜ ಬೆಳಗುವ ವ್ಯಕ್ತಿತ್ವವಾಗುತ್ತದೆ ಎಂದು ಪ್ರಾಧ್ಯಾಪಕ ಡಾ.ಡಿ.ಎಸ್. ದೊಡ್ಡಮನಿ ಹೇಳಿದರು.

ಹೊಳೆಗದ್ದೆಯಲ್ಲಿ ಇತ್ತೀಚೆಗೆ ಸ್ಥಳೀಯ ಶ್ರೀ ಮಹಾಸತಿ ಸೇವಾ ಸಮಿತಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಶ್ರೇಯಾಂಕಿತರಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ದೇವಗಿರಿ ಗ್ರಾಪಂ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಸಾಧನೆ ಬದುಕಿನ ದಿಕ್ಕನ್ನೇ ಬದಲಾಯಿಸಲು ಸಾಧ್ಯ. ಇಂತಹ ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ. ಒಂದು ಊರಿನ ಅಭಿವೃದ್ಧಿ ಶಿಕ್ಷಣ ಪಡೆದ ಸುಸಂಸ್ಕೃತರಿಂದ ಮಾತ್ರ ಸಾಧ್ಯ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ನಾಗರಿಕ ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬೇಕು ಎಂದರು.

ಉದ್ಯಮಿ ಸಚಿನ ನಾಯ್ಕ ಮಾತನಾಡಿ, ಪ್ರತಿಭಾವಂತರು ಸಮಾಜದ ಆಸ್ತಿಯಾಗಬೇಕು. ಉನ್ನತ ಶಿಕ್ಷಣ ಸಾಮಾಜಿಕ ಬದಲಾವಣೆಗೂ ಮತ್ತು ಬದುಕಿಗೂ ದಾರಿ ದೀಪವಾಗುತ್ತದೆ ಎಂದರು.

ನ್ಯೂ ಇಂಗ್ಲಿಷ್ ಸ್ಕೂಲ್ ಪ್ರಾಧ್ಯಾಪಕ ಅಶೋಕ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಸುರೇಶ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ಗೋಪಾಲಕೃಷ್ಣ ಕಾಮತ ಮಾತನಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿನಯ ಶೆಟ್ಟಿ, ರಕ್ಷಿತಾ ಭಂಡಾರಿ, ಅವ್ಯಕ್ತ ಭಟ್, ಕುಸುಮಾ ಭಟ್, ಧನ್ಯಾ ನಾಯ್ಕ, ಸುನೇಹಾ ನಾಯ್ಕ, ಮಧುರಾ ಗೌಡ, ಶಿವರಾಜ ಭಟ್ ಅವರನ್ನು ಪುರಸ್ಕರಿಸಲಾಯಿತು.

ಪ್ರೀತೇಶ ಶಾನಭಾಗ ಭಗವದ್ಗೀತೆ ಶ್ಲೋಕಪಠಿಸಿ ಪ್ರಾರ್ಥಿಸಿದರು. ಶಿಕ್ಷಕ ಪಿ.ಆರ್. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಬಣಿ ಭಂಡಾರಿ ಹಾಗೂ ಶಿಕ್ಷಕ ಸುಬ್ರಾಯ ಶಾನಭಾಗ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net