

ಸಿದ್ದಾಪುರ: ತರಬೇತಿಗಳು ಕೇವಲ ತರಬೇತಿಗಳಾಗಿ ಉಳಿಯದೆ ಮಹಿಳೆಯರ ಸ್ವಾವಲಂಬಿ ಬದುಕು ಸಾಗಿಸುವಂತಾಗಬೇಕು. ತಕ್ಕಮಟ್ಟಿಗೆ ಆರ್ಥಿಕ ಹೊರೆ ನಿಭಾಯಿಸುವ ಶಕ್ತಿ ಅವರಲ್ಲಿ ಬರಬೇಕು. ಅಂದಾಗ ಮಾತ್ರ ತರಬೇತಿಯ ಪ್ರಯೋಜನವಾಗುತ್ತದೆ ಎಂದು ವಾಜಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಐ. ನಾಯ್ಕ ಹೇಳಿದರು.
ತಾಲೂಕಿನ ವಾಜಗೋಡಿನಲ್ಲಿ ವಾಜಗೋಡು ಗ್ರಾಪಂ, ಸೇವಾ ಸಹಕಾರಿ ಸಂಘ, ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸೋಪ್ ಆಯಿಲ್, ಫಿನೈಲ್, ಸೋಪಿನ ಪುಡಿ, ಬಟ್ಟೆ ಸೋಪು, ಮೈ ಸೋಪು, ಶಾಂಪು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಅಧ್ಯಕ್ಷ ಚಂದ್ರಕಲಾ ನಾಯ್ಕ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಇನ್ನೂ ಹೆಚ್ಚಿನ ತರಬೇತಿ ಆಯೋಜಿಸಿ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷ ಎಂ.ಎಸ್. ಹೆಗಡೆ ಮಾತನಾಡಿ, ಮಹಿಳೆಯರು ತರಬೇತಿ ಪಡೆದು ಉತ್ಪಾದಿಸಿದ ವಸ್ತುಗಳಿಗೆ ಸ್ಥಳೀಯ ಸೇವಕಾರಿ ಸೇವಾ ಸಹಕಾರಿ ಸಂಘದಲ್ಲಿ ಮಾರುಕಟ್ಟೆ ಲಭ್ಯವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಎನ್ಆರ್ಎಲ್ಎಂನ ಮಾಲತಿ ನಾಯ್ಕ, ಎನ್ಆರ್ಎಲ್ನ ಬಿ.ಕೆ. ವೀಣಾ ಹೆಗಡೆ ಗ್ರಾಪಂ ಸದಸ್ಯರಾದ ಸರಸ್ವತಿ ಗೌಡ, ಮಂಗಳ ಗೌಡ, ಲಲಿತಾ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೋದಾವರಿ ನಾಯ್ಕ, ಕಾರ್ಯದರ್ಶಿ ಕುಸುಮ ಗೌಡ, ಖಜಾಂಜಿ ಸುಚಿತ್ರಾ ಹೆಗಡೆ, ಇತರರು ಉಪಸ್ಥಿತರಿದ್ದರು.
ವಿವೇಕಾನಂದ ರಾಯ್ಕರ್ ಡೆಮೋ ಮಾಡುವ ಮೂಲಕ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.