

ಹಳಿಯಾಳ: ಸಂಪತ್ತು, ಅಧಿಕಾರ ಹಾಗೂ ವಯಸ್ಸಿನ ಮದ ಇರಬಾರದು. ಇವೆಲ್ಲವೂ ತಾತ್ಕಾಲಿಕವಾಗಿವೆ. ಸಂಪತ್ತು ಇದ್ದಾಗ ಬಡವರಿಗೆ ಸಹಾಯ ಮಾಡಬೇಕು. ಅಧಿಕಾರವಿದ್ದಾಗ ಸಮಾಜದ ಉನ್ನತಿಗೆ ಶ್ರಮಿಸಬೇಕು ಮತ್ತು ತಮ್ಮ ಇಳಿ ವಯಸ್ಸಿನವರೆಗೂ ಮತ್ತೊಬ್ಬರಿಗೆ ಹಾನಿ ಮಾಡದಂತೆ ಬದುಕಬೇಕು ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಮರಾಠಾ ಭವನದಲ್ಲಿ ಗುರುಕುಲ ಪರಿವಾರ, ತಾಲೂಕಿನ ವಾರಕರಿ ಬಂಧುಗಳು, ಸಕಲ ಮರಾಠಾ ಸಂಘ ಸಂಸ್ಥೆಗಳು, ಪ್ರಾಕ್ಸಿನ್ ಟೆಕ್ ಪ್ರೖೆವೇಟ್ ಲಿಮಿಟೆಡ್ ಹಾಗೂ ಭಕ್ತರಿಂದ ಗುರುಪೂರ್ಣಿಮಾ ಹಾಗೂ ಶ್ರೀಗಳ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಜಾತಿ ಕೇವಲ ಒಂದು ಪದ ಮಾತ್ರ ಆಗಿದೆ. ಎಲ್ಲರೂ ನಮ್ಮವರೆಂದು ತಿಳಿದುಕೊಂಡು ಬದುಕಿದರೆ ಶತ್ರುಗಳು ಇರುವುದಿಲ್ಲ. ಸರ್ವ ಸಮುದಾಯಗಳು ಜೊತೆ ಜೊತೆಯಾಗಿ ಹೆಜ್ಜೆ ಹಾಕಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.
ಡಾ. ಮೋಹನ ಪಾಟೀಲ, ಡಾ. ಶೇಖರ ಮಾನೆ, ಪ್ರಕಾಶ ಪಾಕ್ರಿ, ಯೋಗರಾಜ ಎಸ್.ಕೆ., ವಿನೋದ ಸಾಳುಂಕೆ, ರಾಜು ಪೆಜೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಗಳು 51 ರಾಗಗಳಲ್ಲಿ ಹಾಡಿರುವ ಶ್ರೀಮದ್ಭಗವದ್ಗೀತಾ ಮರಾಠಿ ಅವತರಣಿಕೆಯ ಲೋಕಾರ್ಪಣೆ ನಡೆಯಿತು.
ಬೆಳಗ್ಗೆ 7 ಗಂಟೆಯಿಂದ ಗೋ ಪೂಜೆ, ಗುರುದೀಕ್ಷೆ, ಜ್ಞಾನೇಶ್ವರಿ ಪಾರಾಯಣ, ಶ್ರೀಮದ್ ಭಗವದ್ಗೀತಾ ಪಾರಾಯಣ, ಭಜನೆ, ಒಂದು ನೂರು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶ್ರೀಗಳ ಪಾದಪೂಜೆ ನಡೆಯಿತು. ಪ್ರಮುಖರಾದ ಸುಭಾಸ ಕೊರ್ವೆಕರ, ಎಸ್.ಕೆ. ಗೌಡ, ಉಡಚಪ್ಪಾ ಬೊಬಾಟೆ, ಶ್ರೀಪತಿ ಭಟ್, ನಾರಾಯಣ ಠೋಸುರ, ಕುಮಾರ ಬೋಬಾಟಿ, ಸುಮಂಗಲಾ ಅಂಗಡಿ, ಪೂಜಾ ಧೂಳಿ, ಡಾ. ವೈಶಾಲಿ ಮಾನೆ, ಡಾ. ವಿನಾಯಕ ಠಕ್ಕಣ್ಣವರ, ಡಾ ಗಣೇಶ ಅರಸಿಣಗೇರಿ, ಶಿವಾಜೀ ನರಸಾನಿ ಇತರರಿದ್ದರು.