

ಹಾನಗಲ್ಲ: ಸಜ್ಜನರ ಸಂಗದೊಂದಿಗಿದ್ದು ಸುಜ್ಞಾನ, ಸಂಸ್ಕಾರ ಪಡೆದು ಯಶಸ್ವಿ ಬದುಕಿನ ನಡೆ ನಮ್ಮದಾಗಬೇಕಾಗಿದೆ. ಬದಲಾದ ಕಾಲದಲ್ಲಿ ನಮ್ಮ ಕೌಟುಂಬಿಕ ಸಂಬಂಧಗಳು ಆಪ್ತತೆ ಉಳಿಸಿಕೊಂಡು ಮುನ್ನಡೆಯುವ ಅಗತ್ಯವಿದೆ ಎಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪ್ರಾಚಾರ್ಯು ಶ್ರೀದೇವಿ ಗುಜನೂರಮಠ ಹೇಳಿದರು.
ಪಟ್ಟಣದ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತಿ-ಪತ್ನಿಯರಿಬ್ಬರೂ ಉದ್ಯೋಗದ ಒತ್ತಡದಲ್ಲಿ, ಮಕ್ಕಳು ವಸತಿ ನಿಲಯಗಳಲ್ಲಿರುವುದರಿಂದ ಹಾಗೂ ಓದಿನ ಒತ್ತಡದಿಂದ ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಲು ಬೇಕಾಗುವ ವಾತಾವರಣ ಕಡಿಮೆಯಾಗುತ್ತಿದೆ. ಇಡೀ ಕುಟುಂಬ ಕೂಡಿ ಬಾಳುವ ವ್ಯವಸ್ಥೆಯಲ್ಲಿ ಸುಖ-ದುಃಖಗಳನ್ನು ಹಂಚಿಕೊಳ್ಳಲು ಅವಕಾಶವಿತ್ತು. ಪಾಶ್ಚಾತ್ಯ ಸಂಸ್ಕೃತಿಯ ಅಡ್ಡ ಪರಿಣಾಮ ನಮ್ಮ ಮೇಲೆ ಆಗದಂತೆ ನಿಗಾ ವಹಿಸಬೇಕಾಗಿದೆ. ವಚನಗಳು ನಮ್ಮ ಪ್ರತಿ ಮನೆಯ ಮಾತಾದರೆ ಸಂಸ್ಕಾರ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ನಿರಂಜನ ಗುಡಿ ಮಾತನಾಡಿ, ವಚನಗಳಲ್ಲಿ ಸಮರ್ಪಣಾ ಭಾವವಿದೆ. ಕಾಯಕಕ್ಕೆ ಮೊದಲ ಆದ್ಯತೆಯಿದೆ. ಆಧ್ಯಾತ್ಮಿಕ ಚಿಂತನೆಯೂ ಒಳಗೊಂಡು ಸನ್ಮಾರ್ಗದ ಬೋಧನೆ ವಚನಗಳಲ್ಲಿದೆ. ಬಸವಾದಿ ಪ್ರಮಥರು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಗೌರವಿಸಿದ್ದರು. ಆರ್ಥಿಕ, ಸಾಮಾಜಿಕ ಸಮಾನತೆಗೆ ಮೊದಲ ಸ್ಥಾನ ನೀಡಿದ್ದ ವಚನಕಾರರು ಎಲ್ಲಕಾಲಕ್ಕೂ ಸಲ್ಲುವ ಸಂದೇಶಗಳನ್ನು ನೀಡಿದ್ದಾರೆ ಎಂದರು.
ಉಪನ್ಯಾಸ ನೀಡಿದ ಶಿಕ್ಷಕಿ ಎಲ್.ಬಿ. ಓಂಕಾರಿ, ವಚನಗಳು ಸದ್ಗುಣ ಸಂಪನ್ನತೆ ಸಾರುವ ಅತ್ಯಂತ ಸರಳ ಸಮಾಜಮುಖಿ ಚಿಂತನೆಗಳಾಗಿವೆ. ಎಲ್ಲಕಾಲಕ್ಕೂ ಸಲ್ಲುವ ವಚನಗಳು ಈಗ ಎಲ್ಲ ದೇಶ, ಭಾಷೆಯವರನ್ನೂ ಆಕರ್ಷಿಸಿವೆ. ಇಡೀ ಮಾನವಕುಲದ ಉನ್ನತಿಗೆ ಬೇಕಾಗುವ ಸಂಗತಿಗಳು ಇಲ್ಲಿವೆ. ಮನುಷ್ಯನಲ್ಲಿನ ಮೃಗತ್ವವನ್ನು ಪರಿಹರಿಸಿ, ಮಾನವತ್ವದ ನೆಲೆ ನೀಡುವ ಶುಭ್ರ ಸಂದೇಶಗಳು ವಚನಗಳಲ್ಲಿವೆ ಎಂದರು.
ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟರ್ ಆಶಯ ಮಾತುಗಳಾನ್ನಾಡಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಎಸ್.ಸಿ.ಕಲ್ಲನಗೌಡರ, ಸಿ.ಮಂಜುನಾಥ, ಎಸ್.ಸಿ.ಹೇಮಗಿರಿಮಠ, ಅಶೋಕ ದಾಸರ, ಎಂ.ಎಸ್. ಹುಲ್ಲೂರ, ಸುಭಾಸ ಹೊಸಮನಿ, ಎಂ.ಎಸ್. ಅಮರದ, ಅನಿತಾ ಕಿತ್ತೂರ, ಶೋಭಾ ಪಾಟೀಲ, ಸುಮಂಗಲಾ ತಟ್ಟಿಮಠ, ಅಕ್ಕಮ್ಮ ಶೆಟ್ಟರ್, ರೂಪಶ್ರೀ ಗೌಳಿ, ಸವಿತಾ ಉದಾಸಿ, ನೀಲಮ್ಮ ಆಲದಕಟ್ಟಿ, ಮಮತಾ ಹಂಪಣ್ಣನವರ, ಜ್ಯೋತಿ ಬೆಲ್ಲದ ಉಪಸ್ಥಿತರಿದ್ದರು.