

ಧಾರವಾಡ: ಈ ದೇಶದ ವಾಲ್ಮೀಕಿ ಸಮುದಾಯ ವೀರ, ದೀರರಾಗಿದ್ದು, ಅನೇಕ ಕೋಟೆ, ನಾಡನ್ನು ಆಳಿದ ರಾಜ ವಂಶಜರಾಗಿದ್ದಾರೆ. ಆದಿಕವಿ ಮಹರ್ಷಿ ವಾಲ್ಮೀಕಿ ಅವರು ನಮಗೆಲ್ಲ ಆದರ್ಶಪ್ರಾಯರು. ಅವರಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ನೂತನ ಸದಸ್ಯ ಎ್.ಎಚ್.ಜಕ್ಕಪ್ಪನವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾಲ್ಮೀಕಿ ಅವರನ್ನು ಕಳ್ಳ, ದರೋಡೆಕೋರ ಅನ್ನುವುದು ತಪ್ಪು. ಅವರ ರಾಮಾಯಣ ಮಹಾಕಾವ್ಯದ ಸಾಧನೆ ಇಡೀ ಜನಾಂಗಕ್ಕೆ ಪ್ರೇರಣೆ ಆಗಬೇಕು ಎಂದರು.
ಮಹರ್ಷಿ ವಾಲ್ಮೀಕಿ ಓರ್ವ ಪ್ರಕಾಂಡ ಪಂಡಿತ. ರಾಮಾಯಣದಲ್ಲಿನ ಶ್ಲೋಕಗಳು, ಖಂಡಗಳು ವಾಲ್ಮೀಕಿಯವರ ಪಾಂಡಿತ್ಯ ತೋರಿಸಿದ್ದು ವಿಶ್ವಮಟ್ಟದಲ್ಲಿ ಭಾರತದ ಘನತೆ, ಗೌರವ ಹೆಚ್ಚಿಸಿದೆ. ದೇಶದಲ್ಲಿ ಸುಮಾರು 18 ಕೋಟಿ ವಾಲ್ಮೀಕಿ ಸಮುದಾಯ ಇದೆ. ವಾಲ್ಮೀಕಿ ಸಮುದಾಯ, ತಳ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಬೆಳೆದು ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು. ವಾಲ್ಮೀಕಿ ಜಿಲ್ಲಾ ಸಹಕಾರಿ ಸಂಘ ರಚನೆ ಆಗಬೇಕು. ಈ ನಿಟ್ಟಿನಲ್ಲಿ ಸಮಾಜದ ಪ್ರಮುಖರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಮುಖಂಡ ಚಂದ್ರಶೇಖರ ಜುಟ್ಟಲ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರನ್ನು ನಾವೇಲ್ಲರೂ ಸ್ವಾಭಿಮಾನದ ಪ್ರತೀಕವಾಗಿ ಸ್ವೀಕರಿಸಬೇಕು. ಅನಕ್ಷರಸ್ಥ ವಾಲ್ಮೀಕಿ ಇಡೀ ವಿಶ್ವಕ್ಕೆ ರಾಮಾಯಣ ಮಹಾಕಾವ್ಯ ನೀಡಿ, ಸರ್ವಧರ್ಮಿಯರಿಗೂ ಪೂಜ್ಯರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಜಿಲ್ಲಾಧಿಕಾರಿಯೂ ಆದ ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ನಮ್ಮ ರಾಷ್ಟ್ರ ಕಂಡ ಮಹಾಪುರುಷ. ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯವು ಸತ್ಯದ ದಾರಿ ಆಗಿದೆ. ನಮ್ಮ ಜೀವನಕ್ಕೆ ಬದುಕುವ ಮಾರ್ಗವಾಗಿದೆ ಎಂದರು.
ಕೆಸಿಡಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಶರಣು ಮುಷ್ಠಿಗೇರಿ ಅವರು ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಬದುಕು ಹಾಗೂ ವಾಲ್ಮೀಕಿ ರಾಮಾಯಣ, ವಾಲ್ಮೀಕಿ ಸಮುದಾಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಮೋಹನ ಗುಡಿಸಲಮನಿ, ಕವಿವಿ ಸಿಂಡಿಕೇಟ ಮಾಜಿ ಸದಸ್ಯ ಡಾ.ಕಲ್ಮೇಶ ಹಾವೇರಿಪೇಟ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮುಖಂಡರಾದ ಎಂ.ಅರವಿಂದ, ಪರಮೇಶ ಕಾಳೆ, ಸುಶೀಲಾ ಚಲವಾದಿ, ಪರಮೇಶ ಕಟ್ಟಿಮನಿ ಇತರರಿದ್ದರು.
ಸುರೇಶ ಗುಂಡಣ್ಣವರ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ ಮಸ್ಕಿ ನಿರೂಪಿಸಿದರು. ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಯು ಧಾರವಾಡ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ಕಲಾಭವನ ಆವರಣದಲ್ಲಿ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.