ಎಲ್ಲರಲ್ಲೂ ಏಕತೆ, ಸಾಮರಸ್ಯ ಒಡಮೂಡಲಿ

ylp ummachagi
Published on

ಯಲ್ಲಾಪುರ: ನಾವೆಲ್ಲರೂ ಏಕತೆ ಮತ್ತು ಸಾಮರಸ್ಯ ಮೂಡಿಸಿಕೊಂಡು, ಪ್ರೀತಿಯಿಂದ ದೇಶಾಭಿಮಾನಿಗಳಾಗಬೇಕಿದೆ ಎಂದು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ನಾರಾಯಣ ಆಚಾರ್ಯ ಹೇಳಿದರು.

ತಾಲೂಕಿನ ಉಮ್ಮಚಗಿ ಬಳಿಯ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದದಲ್ಲಿ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯದೊಂದಿಗೆ ಕುಮಟಾದ ಹೆಗಡೆಯ ವೇದ ಸಂಸ್ಕೃತ ಅಕಾಡೆಮಿ ಮತ್ತು ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಂ ಹಮ್ಮಿಕೊಂಡಿದ್ದ ಗುರುನಮನಂ ಶಾಸ್ತ್ರಚಿಂತನಂ ಹಾಗೂ ವೇದ, ಜ್ಯೋತಿಷ್ಯ, ಆಯುರ್ವೆದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಂಗೋಷ್ಠಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ನೆರವು ಪಡೆಯದೆಯೂ ಸನಾತನ ಧರ್ಮದ ಸಂರಕ್ಷಣೆಗಾಗಿ ಸ್ವತಃ ಪರಿಪೂರ್ಣ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡು ಏನೆಲ್ಲ ಸಾಧನೆಗಳನ್ನು ಮಾಡಬಹುದೆಂಬುದಕ್ಕೆ ಈ ಸಂಘಟನೆಗಳು ಸಾಕ್ಷಿ ಎಂದರು.

ಜ್ಯೋತಿಷರತ್ನ ಪ್ರೊ. ಎಸ್. ಶ್ರೀನಿವಾಸ ಅಡಿಗ ಸಾಲಿಗ್ರಾಮ ಅವರನ್ನು ಅಡಿಗರ ಶಿಷ್ಯ-ಪ್ರಶಿಷ್ಯ ವೃಂದದವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀನಿವಾಸ ಅಡಿಗ ಮಾತನಾಡಿ, ವ್ಯಕ್ತಿಯ ಸಾಧನೆಗೆ ದೈವಾನುಗ್ರಹವೊಂದೇ ಸಾಲದು, ಇದಕ್ಕೆ ಅಧ್ಯಯನವೂ ಅತ್ಯಂತ ಅಗತ್ಯ ಎಂದರು.

ಸನ್ಮಾನಿತರ ಕುರಿತಾಗಿ ಕುಮಟಾದ ಡಾ.ಜಿ.ಎಲ್. ಹೆಗಡೆ ಮಾತನಾಡಿದರು. ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಚಾರ್ಯ ರಾಮಚಂದ್ರ ಭಟ್ಟ ಹಾಗೂ ಶಂಕರ ಭಟ್ಟ ಬಾಲಿಗದ್ದೆ ಮಾತನಾಡಿದರು. ಶ್ರೀಧರ ಭಟ್ಟ ಐನಕೈ, ವಿ. ಗೋಪಾಲಕೃಷ್ಣ ಶರ್ಮ, ಸಂಸ್ಕೃತ ಪಾಠಶಾಲೆಯ ಅಧ್ಯಾಪಕ ಮಂಜುನಾಥ ಭಟ್ಟ, ಡಾ.ಮಹೇಶ ಭಟ್ಟ ಇಡಗುಂದಿ, ವೇದ ಸಂಸ್ಕೃತ ಅಕಾಡೆಮಿ ನಿರ್ದೇಶಕ ಡಾ.ಗೋಪಾಲಕೃಷ್ಣ ಹೆಗಡೆ, ಸುಮೇರು ಜ್ಯೋತಿರ್ವನಂನ ಡಾ.ಕೆ.ಸಿ. ನಾಗೇಶ ಭಟ್ಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net