ಸಾಹಿತ್ಯ ಕೃಷಿಗೈದವರ ಗುರುತಿಸುವಂತಾಗಲಿ

Literary conference
Published on

ಬ್ಯಾಡಗಿ: ದಶಕಗಳ ಕಾಲ ಸಾಹಿತ್ಯ ಕ್ಷೇತ್ರದ ಸೇವೆ ಗುರುತಿಸಿ, 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತೀವ್ರ ಖುಷಿ ತಂದಿದೆ ಎಂದು ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು.

ಪಟ್ಟಣದ ನಿಸರ್ಗ ನಗರದ ಅವರ ನಿವಾಸದಲ್ಲಿ ಜಿಲ್ಲಾ ಹಾಗೂ ತಾಲೂಕು ಕಸಾಪ ವತಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸಿದ ಎಲ್ಲರಿಗೂ ಗೌರವ ಸಿಗಬೇಕು. ಸಾಹಿತ್ಯ ಕೃಷಿ ಮಾಡಿದವರನ್ನು ಗುರುತಿಸುವ ಮೂಲಕ ಪ್ರೋತ್ಸಾಹ ಹಾಗೂ ಸ್ಪೂರ್ತಿ ತೋರಬೇಕು. ನನ್ನನ್ನು ಗುರುತಿಸಿದ ಜಿಲ್ಲೆಯ ಎಲ್ಲ ಸಾಹಿತ್ಯಾಭಿಮಾನಿಗಳು ಹಾಗೂ ಕಸಾಪ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಸಾಹಿತಿ ಸಂಕಮ್ಮ ಸಂಕಣ್ಣನವರ ಅವರು ಚಲನಚಿತ್ರ ಕಥೆ-ಬರಹ, ಪುಸ್ತಕ, ಕವನ ಸಂಕಲನ, ಪತ್ರಿಕೆಗಳಲ್ಲಿ ವಿವಿಧ ಅಂಕಣ, ಹಲವು ನಾಟಕ ರಚನೆ, ಮೈಲಾರ ಮಹದೇವ ಹಾಗೂ ಸಿದ್ದಮ್ಮರಂತಹ ಹೋರಾಟಗಾರರ ಜೀವನ ಚರಿತ್ರೆ ರಚಿಸಿದ್ದಲ್ಲದೆ, ಆ ಚಲನಚಿತ್ರದಲ್ಲಿ ಪಾತ್ರಧಾರಿಯಾಗಿ ಸಾಹಿತ್ಯಲೋಕವನ್ನು ಮುಗಿಲೆತ್ತರಕ್ಕೆ ಒಯ್ದಿದ್ದಾರೆ. ಬ್ಯಾಡಗಿ ಕೆಂಪು ಮೆಣಸಿನಕಾಯಿ ಕುರಿತ ಕವನ ‘ಬ್ಯಾಡಗಿಯ ಬೆಡಗಿ’ ಹೆಚ್ಚು ಖ್ಯಾತಿಯಾಗಿದೆ ಎಂದರು.

ಪಾಪುರಂತಹ ದೊಡ್ಡ ಸಾಹಿತಿಗಳ ಶಿಷ್ಯೆಯಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದು, ಮಹಿಳಾ ಸಾಹಿತ್ಯ ಲೋಕದಲ್ಲಿ ಅವಿರತ ಸಾಧನೆ ಹಾಗೂ ಕನ್ನಡಾಂಬೆಗೆ ಸಲ್ಲಿಸಿದ ಸೇವೆ ಮರೆಯಲಾಗದು. ಇಂತಹ ಸಾಹಿತಿಗಳನ್ನು ಗೌರವಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜ. 10 ಹಾಗೂ 11ರಂದು ಹಿರೇಕೆರೂರಲ್ಲಿ ಜರುಗುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರನ್ನು ಆಯ್ಕೆ ಮಾಡಿದ್ದೇವೆ. ರಾಜ್ಯದ ಗಮನ ಸೆಳೆಯುವಂತಹ ಕಾರ್ಯಕ್ರಮ ನಾವು ಮಾಡಬೇಕಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಬಿ.ಎಂ. ಜಗಾಪುರ, ಗೋಣೆಪ್ಪ ಸಂಕಮ್ಮನವರ, ಮಾಲತೇಶ ಅರಳಿಮಟ್ಟಿ, ಎನ್. ಸುರೇಶಕುಮಾರ, ಗಿರೀಶ ಇಂಡಿಮಠ, ಪಿ.ಎಸ್. ಸಾಲಿ, ಕುಮಾರ ಮಡಿವಾಳರ, ಮಂಜುನಾಥ ಕಳ್ಳಿಹಾಳ, ರಾಮಣ್ಣ ತೆಂಬದ, ಬಿ.ಟಿ. ಚಿಂದಿ, ಪಿ.ಬಿ. ನಿಂಗನಗೌಡ್ರ, ಬಿ.ವಿ. ಸೊರಟೂರ, ವಸಂತ ಮಾಳಪ್ಪನವರ, ಚಂದ್ರು ಛತ್ರದ, ಈರಣ್ಣ ಬೆಟ್ಟದೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net