ಅಚ್ಛೆ ದಿನ್ ಟೀಕಿಸುವವರಿಗೆ ಅಭಿವೃದ್ಧಿ ನೋಡುವ ಬುದ್ಧಿ ಬರಲಿ

New bjp New 111
Published on

ಹುಬ್ಬಳ್ಳಿ : ಅಚ್ಛೆ ದಿನ್ ಬಗ್ಗೆ ಟೀಕಿಸುವವರಿಗೆ ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡುವ ದೃಷ್ಟಿ ಮತ್ತು ಬುದ್ಧಿ ಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀರಾಮ ಕಲ್ಪಿತ ವ್ಯಕ್ತಿಯೆಂದು ಹೇಳಿದವರು ಹಿಂದುಗಳ ಮತ ಸೆಳೆಯುವ ಉದ್ದೇಶದಿಂದ ಅಯೋಧ್ಯೆಯ ಶ್ರೀರಾಮ ಮಂದಿರದ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದರು.

ಪ್ರಧಾನಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಕಳೆದ ಹಲವಾರು ವರ್ಷಗಳಿಂದ ನಕಲಿ ಗಾಂಧಿ ಕುಟುಂಬದವರು ಪ್ರಧಾನಿ ಆಗಿಲ್ಲ. ಜನೌಷಧಿ ಕೇಂದ್ರಗಳ ಹೆಸರಿನ ಮುಂದೆ ಪ್ರಧಾನಿ ಎಂಬ ಶಬ್ಧ ಇರುವುದರಿಂದ ಈ ಕೇಂದ್ರಗಳನ್ನು ಸ್ಥಗಿತಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.

ಈ ಮೊದಲಿನ ಕಾಂಗ್ರೆಸ್ ಸರ್ಕಾರಗಳು ನಕ್ಸಲ್​ರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಹಣ ನೀಡುತ್ತಿದ್ದವು. ಆದರೆ, ಮೋದಿ ಪ್ರಧಾನಿ ಆದ ನಂತರ ನಕ್ಸಲ್​ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನಕ್ಸಲಿಸ್ಂ ಸಂಪೂರ್ಣ ಬಂದ್ ಆಗುವ ಹಂತದಲ್ಲಿದೆ. ಈ ಮಧ್ಯೆ ಕೆಲ ರಾಜಕೀಯ ಪಕ್ಷದವರು ಇನ್​ಕೌಂಟರ್​ಗೊಳಗಾದ ನಕ್ಷಲ್​ರ ಬಗ್ಗೆ ಕನಿಕರ ತೋರುತ್ತಿದ್ದಾರೆ ಎಂದು ದೂರಿದರು.

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ದೊರಕಿದ್ದ ಕಾಯಂ ಭದ್ರತಾ ಸ್ಥಾನವನ್ನು ತಮ್ಮ ಮೂರ್ಖತನದಿಂದಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಚೀನಾಕ್ಕೆ ಬಿಟ್ಟುಕೊಟ್ಟರು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ವಿರೋಧಿಸುತ್ತ ಬಂದಿರುವ ಕಾಂಗ್ರೆಸ್, ಇದೀಗ ಬಿಜೆಪಿ ಮೀಸಲಾತಿ ಕಿತ್ತೊಗೆಯುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜನರೇ ಕಾಂಗ್ರೆಸ್ ಅನ್ನು ಬುಡಸಮೇತ ಕಿತ್ತೊಗೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಜಗತ್ತಿನ ಐದು ಆರ್ಥಿಕ ದುರ್ಬಲ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಇದೀಗ ಜಾಗತಿಕ ಮಟ್ಟದಲ್ಲಿ 5ನೇ ಆರ್ಥಿಕ ಅತಿದೊಡ್ಡ ದೇಶವಾಗಿ ಭಾರತ ಅಭಿವೃದ್ಧಿ ಹೊಂದಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದರು.

1999ರಿಂದ 2014ರವರೆಗೆ ದೇಶದಲ್ಲಿ ಸುಭದ್ರ ಸರ್ಕಾರ ಇರಲಿಲ್ಲ, ಸಮರ್ಥ ನಾಯಕನೂ ಕಾಣಿಸಿಕೊಂಡಿರಲಿಲ್ಲ. ಆ ಅವಧಿಯಲ್ಲಿ ಅರಾಜಕತೆ ನಿರ್ಮಾಣಗೊಂಡಿತ್ತು. 2014ರ ನಂತರ ದೇಶದಲ್ಲಿ ಸ್ಥಿರ ಸರ್ಕಾರ ನಿರ್ಮಾಣಗೊಂಡಿದೆ. ದೇಶಕ್ಕೆ ಅತ್ಯುತ್ತಮ ನಾಯಕ ದೊರಕಿದ್ದಾರೆ. ಹೀಗಾಗಿ, ದೇಶ ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಯೋತ್ಪಾದನಾ ಚಟುವಟಿಕೆಗಳಿಗೆ ನಿಯಂತ್ರಣ ಹೇರಲಾಗಿದೆ. ಭಯೋತ್ಪಾದನಾ ದಾಳಿ ನಡೆದರೆ ಬೇರೆ ದೇಶಕ್ಕೆ ಹೋಗಿ ಅಹವಾಲು ಸಲ್ಲಿಸುವ ಪರಿಸ್ಥಿತಿ ಈಗಿಲ್ಲ. ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ದೇಶಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಕೆಎಲ್​ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಯಾವ ವ್ಯಕ್ತಿ ಹಾಗೂ ಪಕ್ಷಕ್ಕೆ ಮತ ನೀಡಿದರೆ ದೇಶ ಸುರಕ್ಷಿತವಾಗಿರುತ್ತದೆ ಎಂಬುದನ್ನು ಜನರು ತಿಳಿಯಬೇಕು. ಚುನಾವಣೆ ಸಂದರ್ಭದಲ್ಲಿ ಆಮೀಷಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.

ಮಹಾಪೌರ ರಾಮಪ್ಪ ಬಡಿಗೇರ, ಉಪ ಮಹಾಪೌರರಾದ ದುರ್ಗಮ್ಮ ಬಿಜವಾಡ, ಉದ್ಯಮಿಗಳಾದ ಎಚ್.ಎನ್. ನಂದಕುಮಾರ, ವಿ.ಎಸ್.ವಿ. ಪ್ರಸಾದ, ಮಹಾದೇವ ಕರಮರಿ, ಆಧ್ಯಾತ್ಮ ಚಿಂತಕಿ ಡಾ. ರೂಪಾ ಅಯ್ಯರ್, ಬಿಜೆಪಿಯ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net