

ನರಗುಂದ: ಸಮರ್ಪಕ ಮಳೆ, ಬೆಳೆ ಬಂದಿದ್ದರಿಂದ ಸರ್ಕಾರ ನರಗುಂದ ತಾಲೂಕನ್ನು ಈ ಬಾರಿ ಬರಪೀಡಿತವೆಂದು ಘೊಷಿಸಿಲ್ಲ. ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಕಾರ್ವಿುಕರಿಗೆ ಉದ್ಯೋಗದ ಸಮಸ್ಯೆಗಳಾಗದಂತೆ ಅಧಿಕಾರಿಗಳು ಸೂಕ್ತ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನರಗುಂದ, ರೋಣ, ಗದಗ ತಾಲೂಕು ಮಟ್ಟದ ಬರ ನಿರ್ವಹಣೆ, ಮುಂಗಾರು ಪೂರ್ವ ಸಿದ್ಧತೆಗಳ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂರು ತಾಲೂಕುಗಳ ಕಟ್ಟಕಡೆಯ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ನೀರಿನ ಸಮಸ್ಯೆಗಳಿದ್ದರೂ ಸಭೆಯಲ್ಲಿ ಪ್ರಸ್ತಾಪಿಸದೆ ಸುಮ್ಮನೆ ಕುಳಿತು ಹೋದ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಆಗ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಗದಗ ತಾಲೂಕಿನ ಕೊನೇ ಭಾಗದ ಪಾಪನಾಶಿ, ಹೊಂಬಳ, ಎಚ್.ಎಸ್. ವೆಂಕಟಾಪುರ, ಚಿಕ್ಕಹಂದಿಗೋಳ, ಬೆಳಹೊಡ, ಮದಗಾನೂರ, ನೀರಲಗಿ, ನಾಗಸಮುದ್ರ ಹಾಗೂ ರೋಣ ತಾಲೂಕಿನ ಹೊಳೆಆಲೂರ ಭಾಗದ 6 ಗ್ರಾಪಂ, ನರಗುಂದ ತಾಲೂಕಿನ 11 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆ. ಈ ಎಲ್ಲ ಗ್ರಾಮಗಳಲ್ಲಿ ಬೇಸಿಗೆ ಸಂದರ್ಭ ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಬೋರ್ವೆಲ್ ಅಥವಾ ಕೆರೆಗೆ ನೀರು ತುಂಬಿಸುವ ಕೆಲಸಗಳಾಗಬೇಕು. ಮಲಪ್ರಭಾ ನದಿಗೆ ನೀರು ಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮೂರು ತಾಲೂಕುಗಳ ತಹಸೀಲ್ದಾರ್, ತಾಪಂ ಇಒಗಳಿಗೆ ನಿರ್ದೇಶನ ನೀಡಿದರು.
ಯಾರಾದರೂ ಕುಡಿಯುವ ನೀರಿನ ಪೂರೈಕೆ ಯೋಜನೆಗಳಿಗೆ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸಿದರೆ ಅಂತವರ ವಿರುದ್ಧ ಪಿಡಿಒಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಂತವರನ್ನು ವರ್ಗಾವಣೆ ಮಾಡಲಾಗುವುದು ಎಂದರು.
ಬೇಸಿಗೆಯಲ್ಲಿ ಎನ್ಆರ್ಇಜಿ ಕೂಲಿಕಾರ್ವಿುಕರು, ಶಾಲೆ, ಕಾಲೇಜ್, ಅಂಗನವಾಡಿ ಮಕ್ಕಳಿಗೆ ಕುಡಿಯಲು ಶುದ್ಧ ನೀರು, ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ ಜತೆಗೆ ಸಾರ್ವಜನಿಕರ ಆರೋಗ್ಯಕ್ಕೆ ಕೈಗೊಳ್ಳಬೇಕಾದ ವಿವಿಧ ಮುಂಜಾಗ್ರತೆ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಬೇಕು. ಪೂರ್ವ ಮುಂಗಾರ ಸಂದರ್ಭದಲ್ಲಿ ನರಗುಂದ ಪಟ್ಟಣ ಸೇರಿ ಮೂರು ತಾಲೂಕುಗಳ ಪ್ರತಿಯೊಂದು ಗ್ರಾಮಗಳ ರಸ್ತೆ, ಚರಂಡಿ, ಹಳ್ಳ-ಕೊಳ್ಳಗಳ ಸ್ವಚ್ಛತೆ ಕೈಗೊಂಡು ನೈರ್ಮಲ್ಯೀಕರಣಕ್ಕೆ ಪ್ರಾಧಾನ್ಯ ನೀಡುವ ಮೂಲಕ ಬೇಸಿಗೆ ಹಾಗೂ ಪೂರ್ವ ಮುಂಗಾರು ಸಿದ್ಧತೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂರು ತಾಲೂಕಿನ ತಹಸೀಲ್ದಾರ್, ತಾಪಂ ಇಒ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ, ಗ್ರಾಪಂ ಪಿಡಿಒಗಳು ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಪರಿಹಾರ, ಅನುದಾನದ ಕುರಿತು ಶಾಸಕರಿಗೆ ಮಾಹಿತಿ ನೀಡಿದರು. ನರಗುಂದ ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಎಸ್.ಕೆ. ಇನಾಂದಾರ, ರೋಣ ತಹಸೀಲ್ದಾರ್ ನಾಗರಾಜ ಕೆ., ಇಒ ಚಂದ್ರಶೇಖರ ಕಂದಕೂರ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಇಒ ಮಲ್ಲಯ್ಯ ಕೊರವನವರ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
ಕಾಮಗಾರಿಗಳ ಅನುಷ್ಠಾನಕ್ಕೆ ಶ್ರಮಿಸಿ
ಕೇಂದ್ರ ಸರ್ಕಾರ ಎನ್ಆರ್ಇಜಿ ಯೋಜನೆಯಡಿ ಮತಕ್ಷೇತ್ರದಲ್ಲಿ ಮಹತ್ವದ ಕಾಮಗಾರಿಗಳ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು. ಪದೇಪದೆ ಜಿಪಿಎಸ್ ಮಾಡುವುದರಿಂದ ಕಾರ್ವಿುಕರಿಗೆ ನಿರಂತರ ಕೆಲಸ ನೀಡಲು ತಾಂತ್ರಿಕ ಸಮಸ್ಯೆ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ರ್ಚಚಿಸಿ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡಲಾಗುವುದು ಎಂದು ಶಾಸಕರು ಅಧಿಕಾರಿಗಳಿಗೆ ಭರವಸೆ ನೀಡಿದರು.
ಮಹತ್ವದ ಸಭೆಗೆ ಬರೋದಕ್ಕಾಗಲ್ವ
ನೀರಲಗಿ ಗ್ರಾಪಂ ವ್ಯಾಪ್ತಿಯ ನಾಗಸಮುದ್ರ ಗ್ರಾಮಕ್ಕೆ 2.5 ಕಿಲೋ ಮೀಟರ್ ಕುಡಿಯುವ ನೀರಿನ ಪೈಪ್ ಕಾಮಗಾರಿ ಕೈಗೊಂಡು ಸಮರ್ಪಕ ನೀರು ಪೂರೈಸಲು ಸಾಧ್ಯವಿದೆ. ಆದರೆ, ಕಳೆದ ಆರು ತಿಂಗಳಿನಿಂದ ಗದಗ ಕೊನೇ ಭಾಗದ ಹಳ್ಳಿಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ನಿಮಗ್ಯಾಕೆ ಮಾಹಿತಿ ಇಲ್ಲ. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಜೆಇ ಆಗಿ 6 ತಿಂಗಳ ಹಿಂದೆ ನೇಮಕಗೊಂಡಿದ್ದರೂ ಹೊಸ ಹುರುಪಿನಲ್ಲಿ ಕೆಲಸ ಮಾಡುತ್ತಿಲ್ಲ ಏಕೆ?. ತಾಲೂಕು ಮಟ್ಟದ ಬರ ನಿರ್ವಹಣೆ, ಪೂರ್ವ ಮುಂಗಾರು ಸಿದ್ಧತೆಗಳ ಸಭೆಗೆ ಬಹುತೇಕರು ಗೈರಾಗಿದ್ದಾರೆ. ಈ ಸಭೆಯನ್ನು ಯಾವ ಪುರುಷಾರ್ಥಕ್ಕೆ ನಡೆಸಬೇಕು. ಮಹತ್ವದ ಸಭೆ ಕರೆದರೆ ಬರೋದಕ್ಕಾಗಲ್ವ ಎಂದು ಅಧಿಕಾರಿಗಳ ವಿರುದ್ಧ ಸಿಸಿಪಿ ಅಸಮಾಧಾನ ವ್ಯಕ್ತಪಡಿಸಿದರು.