ಧರ್ಮ ಧರ್ಮಗಳ ನಡುವೆ ಸಾಮರಸ್ಯ ಮೂಡಲಿ; ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಾನಂ ಲೋಕೇಶ್

12_HSN_03
Published on

ಹಾಸನ: ಜಾಗತೀಕ ಕಾಲದಲ್ಲಿ ಬಹಳಷ್ಟು ದೇಶಗಳಲ್ಲಿ ಮಾನವ ಹಕ್ಕುಗಳಿಗೆ ಚ್ಯುತಿ ಬರುವುದನ್ನು ನೋಡುತ್ತಿದ್ದೇವೆ. ಧರ್ಮ ಧರ್ಮಗಳ ಬಡಿದಾಟ, ವೈಮನಸ್ಸು ಉದ್ಭವ ಆಗುತ್ತಿದ್ದು, ಇದು ನಿಲ್ಲಬೇಕಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಾನಂ ಲೋಕೇಶ್ ತಿಳಿಸಿದರು.

ನಗರದ ಸಂಗಮೇಶ್ವರ ಬಡಾವಣೆ, ಜವೇನಹಳ್ಳಿ ಕೆರೆ ಬಳಿ ಇರುವ ಹಿರಿಯ ನಾಗರಿಕರ ಸಭಾಂಗಣದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಇವರ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಸಮಿತಿಯ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜೀವನ ಮಾಡುವುದಕ್ಕೆ ಪ್ರಮುಖವಾದುದ್ದು ವ್ಯಕ್ತಿಯ ಹಕ್ಕು ಮತ್ತು ಕರ್ತವ್ಯಗಳು. ನಾವು ಎಲ್ಲರೂ ಕೂಡ ಮಾನವರೇ. ನಮ್ಮ ಹಕ್ಕುಗಳ ಉಳಿಸಿಕೊಳ್ಳಲು ಕೂಡ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಆಲೋಚನೆ ಮಾಡಬೇಕಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ಮಾನವ ಹಕ್ಕಗಳ ಆಯೋಗ ಸ್ಥಾಪನೆಯಾದ ನಂತರ ಹಲವಾರು ಸಂಘ- ಸಂಸ್ಥೆಗಳು ಮಾನವ ಹಕ್ಕುಗಳ ವಿಚಾರವಾಗಿ ಹುಟ್ಟಿಕೊಂಡಿವೆ. ಹಾಸನದಲ್ಲೂ ಕೂಡ ಮಾನವ ಹಕ್ಕುಗಳ ಜನಸೇವಾ ಸಮಿತಿ ಜನ್ಮ ತಾಳಿದೆ. ಏನಾದನರೂ ಸಮಸ್ಯೆ ಇದ್ದರೆ ನಮ್ಮ ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದರೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.

ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘಟನೆ ರಾಜ್ಯಾಧ್ಯಕ್ಷೆ ಸಿ.ಎಂ. ನಾಗರತ್ನಾ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಾವು ಎಂದು ಸಹಿಸುವುದಿಲ್ಲ. ಇವತ್ತು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಯಾವಾಗ ನಡುರಾತ್ರಿಯಲ್ಲಿ ಹೆಣ್ಣು ಮಗಳು ಓಡಾಡುತ್ತಾಳೋ ಅವತ್ತು ದೇಶಕ್ಕೆ ಸ್ವಾತಂತ್ರ್ಯ. ನಮ್ಮನ್ನೆಲ್ಲಾ ಕಾಯುತ್ತಿರುವುದು ಆರಕ್ಷಕರು. ಕೆಲ ದಿನಗಳ ಹಿಂದೆ ಹೆಣ್ಣು ಮಗಳು ಪೊಲೀಸ್ ಠಾಣೆಗೆ ದೂರು ಕೊಡಲು ಬಂದರೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ರಕ್ಷಣೆ ಕೊಡುವವರೇ ಭಕ್ಷಕರಾದರೆ ಹೇಗೆ ನಮ್ಮ ದೇಶ ಉದ್ಧಾರವಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಚಿಕ್ಕ ಮಕ್ಕಳ ಮೇಲೆ ಉಪಾಧ್ಯಕರೆ ಅತ್ಯಾಚಾರ ಮಾಡುತ್ತಾರೆ. ಅಕ್ಕಪಕ್ಕದ ಮನೆಯವರು ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿರುವುದು ನಮ್ಮ ದೇಶದ ದೊಡ್ಡ ದುರಂತ. ಅತ್ಯಾಚಾರ ಮಾಡಿದವನ ಕಡೆಗೂ ರಾಜಕೀಯ ಸಹಕಾರ ಕೊಡುತ್ತದೆ. ಸತ್ತವನಿಗೂ ರಾಜಕೀಯ ಸಹಕಾರ ಕೊಡುತ್ತದೆ. ಅತ್ಯಾಚಾರಿಯನ್ನು ಕಠಿಣವಾಗಿ ಶಿಕ್ಷಿಸುವ ಕಾನೂನು ತರುವವರಿಗೂ ಈ ದೌರ್ಜನ್ಯ ಅತ್ಯಾಚಾರ ನಿಲ್ಲುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಗೌರವಾಧ್ಯಕ್ಷ ಎ.ಎಸ್. ಸುರೇಶ್, ಜಿಲ್ಲಾಧ್ಯಕ್ಷ ರಘುಗೌಡ, ವಕೀಲರಾದ ಯೋಗೀಶ್, ಸಿ.ಎಸ್. ರವಿಕಿರಣ್, ಜಿಲ್ಲಾಧ್ಯಕ್ಷೆ ಎಚ್.ಎಸ್. ಪ್ರತಿಮಾ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net