

ಭಟ್ಕಳ: ಅಂಧತ್ವ ನಿವಾರಣೆ, ಬಡವರು ಉಚಿತವಾಗಿ ಕನ್ನಡಕಗಳನ್ನು ಸರ್ಕಾರಿ ಆಸ್ಪತ್ರೆಯಿಂದಲೆ ಪಡೆಯಬೇಕು ಹಾಗೂ ಕಣ್ಣಿನ ಎಲ್ಲಾ ಸಮಸ್ಯೆಗಳಿಗೂ ಒಂದೇ ಕಡೆ ಪರಿಹಾರ ದೊರೆಯಬೇಕು ಎಂದು ರಾಜ್ಯ ಸರ್ಕಾರ ಆಶಾಕಿರಣ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ತಾಲೂಕಾಸ್ಪತ್ರೆ ಸಹಯೋಗದಲ್ಲಿ ಆಶಾಕಿರಣ ಕಾರ್ಯಕ್ರಮದಡಿ ಸರಬರಾಜಾದ ಕನ್ನಡಕ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೃಷ್ಟಿ ದೋಷ, ಕಣ್ಣಿನ ಪೊರೆ ಸೇರಿ ಕಣ್ಣಿಗೆ ಸಂಬಂಧಿಸಿದ ಯಾವುದೇ ದೋಷ ಬಂದರೂ ಅದನ್ನು ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೆ 9 ಸಾವಿರಕ್ಕೂ ಅಧಿಕ ಜನರು ಕಣ್ಣಿನ ಪೊರೆಯ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿಕೊಂಡಿದ್ದಾರೆ. 49,615 ಫಲಾನುಭವಿಗಳಿಗೆ ಕನ್ನಡಕದ ಅವಶ್ಯಕತೆ ಕಂಡುಬಂದಿದ್ದು, ಅವರಿಗೆಲ್ಲ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ತಾಲೂಕಾಸ್ಪತ್ರೆಗಳಲ್ಲಿ ಕಣ್ಣಿನ ತಪಾಸಣೆ ನಡೆಸಿ ಅಲ್ಲಿಯೂ ಉಚಿತ ಕನ್ನಡಕಗಳನ್ನು ನೀಡಲಾಗುವುದು. ಇದಕ್ಕೆ ಬಿಪಿಎಲ್, ಎಪಿಎಲ್ ಎನ್ನುವ ಯಾವುದೆ ಮಾನದಂಡವಿಲ್ಲದೆ ಎಲ್ಲರಿಗೂ ಈ ಉಚಿತ ಆಶಾಕಿರಣ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದರು. </p><p>ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಂಕರ ಮಾತನಾಡಿ, 6 ವರ್ಷದಿಂದ 80 ವರ್ಷದವರೆಗೂ ಅಥವಾ ಅವಶ್ಯಕತೆ ಇರುವ ಎಲ್ಲರೂ ಆಶಾಕಿರಣದ ಪ್ರಯೋಜನ ಪಡೆಯಬಹುದು ಎಂದರು.
ಡಿಎಚ್ಒ ಡಾ. ನೀರಜ್ ಮಾತನಾಡಿದರು. ಶಿರಾಲಿ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಾಲಚಂದ್ರ ಮೇಸ್ತ ಇದ್ದರು.
ಬಾಯಿ ಆರೋಗ್ಯ ಕಾಪಾಡಿಕೊಳ್ಳಲಿ
ಮಾ. 20ರಂದು ನಡೆಯಲಿರುವ ಬಾಯಿ ರೋಗ ದಿನಾಚರಣೆ ನಿಮಿತ್ತ ಹಲವು ಜನರಿಗೆ ಟೂತ್ ಪೇಸ್ಟ್ ಮತ್ತು ಬ್ರಷ್ಗಳನ್ನು ವಿತರಿಸಲಾಯಿತು. ದಂತ ತಜ್ಞೆ ಡಾ. ಕಮಲಾ ನಾಯಕ ಮಾತನಾಡಿ, ಎಲ್ಲರೂ ಬಾಯಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಪಿ.ವಿ. ಟಿಎಚ್ಒ ಡಾ. ಸವಿತಾ ಕಾಮತ, ಎಫ್ಡಿಸಿ ವೆಂಕಟೇಶ ನಾಯ್ಕ, ನಾಗಶ್ರೀ ನಾಯ್ಕ ಹಾಗೂ ಶ್ರೀನಿವಾಸ ಆರ್. ಕಾರ್ಯಕ್ರಮ ನಿರ್ವಹಿಸಿದರು.