ಯುವ ಪೀಳಿಗೆ ಸಮಾಜವನ್ನು ಮುನ್ನಡೆಸುವಂತಾಗಲಿ

 ಹಂಚೀಪುರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಅವರನ್ನು ಸನ್ಮಾನಿಸಲಾಯಿತು.
ಹಂಚೀಪುರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಅವರನ್ನು ಸನ್ಮಾನಿಸಲಾಯಿತು.
Published on

ಸರಗೂರು: ಹನ್ನೆರಡನೇ ಶತಮಾನದ ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರ ತತ್ವ ಮತ್ತು ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಬಸವ ಸಮಿತಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಅರ್ಜುನ್ ತಿಳಿಸಿದರು.

ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚೀಪುರ ಗ್ರಾಮದ ಗುರುಮಲ್ಲೇಶ್ವರ ಪಟ್ಟದ ಮಠದ ಆವರಣದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಬಸವ ಬಳಗ ಸಂಘ ಸ್ಥಾಪನೆ ಮತ್ತು ಯುವ ಸಮಿತಿ ಪದಗ್ರಹಣ ಕಾರ್ಯಕ್ರಮವನ್ನು ಗುರುಮಲ್ಲೇಶರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಹಾಗೂ ಶರಣರ ತತ್ವ, ಶರಣರ ಸಂಸ್ಕೃತಿ, ಸಮಾನತೆಯ ತತ್ವವನ್ನು ಸಾರುವ ಉದ್ದೇಶದಿಂದ 1964ರಲ್ಲಿ ಬಸವ ಸಮಿತಿ ಸ್ಥಾಪಿಸಲಾಯಿತು. ಅಂದಿನಿಂದ ಈವರೆಗೆ ಮಾನವಿಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಸವ ಸಂದೇಶ ಹಾಗೂ ಶರಣರ ತತ್ವಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದರು.

ಬಸವ ಸಮಿತಿ ಪ್ರಾರಂಭವಾದಾಗಿನಿಂದ ತ್ವರಿತಗತಿಯಲ್ಲಿ ಬೆಳವಣಿಗೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಹೊಂದುವ ಮೂಲಕ ಸಮಾಜವನ್ನು ಮುನ್ನಡೆಸಬೇಕು ಎಂದರು.

ಬಸವ ಬಳಗದ ಜಿಲ್ಲಾಧ್ಯಕ್ಷ ಪ್ರದೀಪ್ ಮಾತನಾಡಿ, ತಾಲೂಕಿನಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಬೇಕು. ಬಸವಣ್ಣ ಕುದುರೆ ಮೇಲೆ ಕುಳಿತಿರುವ ಪುತ್ಥಳಿ ಪ್ರತಿ ಗ್ರಾಮದಲ್ಲಿ ಆಗಬೇಕು. ಈ ಬಾರಿ ತಾಲೂಕಿನ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಭರವಸೆ ಇದೆ ಎಂದರು.

ಸಾವಿರಾರು ಹಳಿ ್ಳ ಜನರು ನಿತ್ಯ ಪೂಜ್ಯರ ಪ್ರವಚನ, ಭಜನೆ, ಲಾವಣಿ ಪದ್ಯ, ಸಂಗೀತ ಮತ್ತು ಜಾನಪದ ಹಾಡುಗಳನ್ನು ಉತ್ಸಾಹದಿಂದ ಬಸವ ಪುತ್ಥಳಿ ಮುಂಭಾಗ ಹಾಡುವಂತಾಗಬೇಕು ಎಂದರು.

ಪಡವಲು ವೀರಕ್ತ ಮಠದ ಮಹದೇವಸ್ವಾಮಿ ಸ್ವಾಮೀಜಿ, ದಡದಹಳ್ಳಿ ಮಠದ ಶ್ರೀಷಡಕ್ಷರಿ ಸ್ವಾಮೀಜಿ, ಹಂಚೀಪುರ ಸಿದ್ದಮಲ್ಲೇಶ್ವರ ಪಟ್ಟದ ಮಠದ ಚನ್ನಬಸವ ಸ್ವಾಮೀಜಿ, ಕಿರಿಯ ತೋಂಟದಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೀರಭದ್ರಪ್ಪ, ಕೋಶಾಧ್ಯಕ್ಷ ಸಿ.ಕೆ.ಗಿರೀಶ್ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ನಂದೀಶ್, ಗಿರಿ ಕುಮಾರ್, ಸಿದ್ದಪ್ಪ, ಗುರುಸ್ವಾಮಿ, ಪಪಂ ಉಪಾಧ್ಯಕ್ಷ ಶಿವಕುಮಾರ್, ಡಿ.ಸಿ.ಸಿದ್ದಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಹಂಚೀಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪಿ.ನಟರಾಜು, ಮಹಾಸಭಾದ ಟೌನ್ ಅಧ್ಯಕ್ಷ ಎಸ್.ಎನ್.ಮೋಹನ್‌ಕುಮಾರ್, ನಂಜಪ್ಪ, ಜಯಕುಮಾರ್, ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭಕ್ತ ಬಳಗದ ಸಂಘ ಅಧ್ಯಕ್ಷ ಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಶಿವರಾಜಪ್ಪ, ಪಪಂ ಮಾಜಿ ಅಧ್ಯಕ್ಷೆ ಜ್ಯೋತಿ ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net