

ಹುಬ್ಬಳ್ಳಿ: ತಿರುಪತಿ ಲಡ್ಡುದಲ್ಲಿ ಮಾಂಸ ಇತ್ಯಾದಿ ವಸ್ತುಗಳು ಪತ್ತೆಯಾಗಿರುವುದನ್ನು ಲ್ಯಾಬ್ ವರದಿ ಸ್ಪಷ್ಟಪಡಿಸಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೂಡ ಹೇಳಿದ್ದರಲ್ಲಿ ಸತ್ಯ ಇದೆ. ಹಾಗಾಗಿ, ಇದರಲ್ಲಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ತುಪ್ಪ ಬಂದ್ ಮಾಡಿಸಿದ ನಂತರ ಈ ತರದ ವಸ್ತುಗಳನ್ನು ಖರೀದಿ ಮಾಡಿ ಲಡ್ಡು ತಯಾರಿಸಲಾಗಿದೆ. ಹಿಂದಿನ ಆಂಧ್ರಪ್ರದೇಶ ಸರ್ಕಾರ ಹಾಗೂ ಕಾಂಗ್ರೆಸ್‌ನವರ ಹಿಂದು ವಿರೋಧಿ ನೀತಿಯಿಂದ ಈ ರೀತಿ ಆಗುತ್ತಿದೆ. ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರು ಈ ರೀತಿ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಪ್ರಸಾದ ವಿತರಣೆಯಲ್ಲಿ ಆಯಾ ಸರ್ಕಾರಗಳು ಮೂಗು ತೂರಿಸದೆ ದೇವಸ್ಥಾನ ಆಡಳಿತ ಮಂಡಳಿಯವರು ನಿರ್ಧಾರ ಮಾಡಬೇಕು ಮತ್ತು ಪರಿಶೀಲಿಸಬೇಕು. ದೇಶದ ನಂಬಿಕೆ, ಸಂಸ್ಕೃತಿ, ಶ್ರದ್ಧೆ ಪ್ರಶ್ನೆ ಹಾಳು ಮಾಡಬಾರದು ಎಂದರು.
ಮೊಹಬ್ಬತ್ ಕಾ ದುಖಾನ್ ಎನ್ನುವ ಕಾಂಗ್ರೆಸ್‌ನ ನಾಯಕ ರಾಹುಲ್‌ಗಾಂಧಿ, ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡಲು ಹಚ್ಚಿದ್ದಾರೆ. ಸಂವಿಧಾನ ವಿರೋಧಿ ನಡವಳಿಕೆ ಮುಂದುವರಿಸಿದ್ದಾರೆ. ಸಿಖ್ ಸಹೋದರರನ್ನು ಅವಮಾನಿಸಿದ್ದಾರೆ. ವಿದೇಶದ ನೆಲದಲ್ಲಿ ಬಹುಸಂಸ್ಕೃತಿಯ ನಾಡಾದ ನಮ್ಮ ದೇಶದ ಮಾನವನ್ನು ಹರಾಜು ಮಾಡಿದ್ದಾರೆ ಎಂದು ತಿವಿದರು.
ಗಣೇಶನ ಮೆರವಣಿಗೆ ಮಾಡಿದವರ ಮೇಲೆ ಎಫ್‌ಐಆರ್ ಹಾಕಲಾಗುತ್ತಿದೆ. ನೋಡಲು ಹೋದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಆರ್. ಅಶೋಕ ಅವರ ಮೇಲೂ ಎಫ್‌ಐಆರ್ ದಾಖಲಾಗಿದೆ. ಮಸೀದಿ ಬಂದರೆ ಗಣೇಶ ಹಾಡು ಬಂದ್ ಮಾಡಬೇಕಂತೆ. ರಾಜ್ಯ ಸರ್ಕಾರ ತುಷ್ಟೀಕರಣ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.