

ಕುಮಟಾ: ಅಪ್ರತಿಮವಾದ ಧಾರ್ವಿುಕ ಒಗ್ಗಟ್ಟು ಎಲ್ಲ ಸಮಾಜದ ಬದುಕಿನ ಅಡಿಪಾಯವಾಗಬೇಕು. ಸಂಸ್ಕಾರ ಬಾರದೇ ಧಾರ್ವಿುಕ ಒಗ್ಗಟ್ಟು ಇಲ್ಲ. ಸಮಾಜ ಎಲ್ಲ ಸ್ತರಗಳಲ್ಲಿ ಬೆಳೆಯಬೇಕು ಎಂದಾದರೆ ಎಲ್ಲದಕ್ಕೂ ಸಂಸ್ಕಾರ ಬೇಕು ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾರಾಜರು ನುಡಿದರು.
ಕೋನಳ್ಳಿಯಲ್ಲಿ ವನದುರ್ಗಾ ಮಂದಿರ ಪರಿಸರದಲ್ಲಿ ಗುರುವಾರ ಆಯೋಜಿಸಿದ್ದ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ವಿಧ್ಯುಕ್ತ ಶುಭಾರಂಭವಿತ್ತು ಆಶೀರ್ವಚನ ನೀಡಿದರು.
ನಿರಂತರ ಭಗವಂತನ ಆರಾಧನೆ ಮಾಡಬೇಕು. ಪ್ರತಿಯೊಬ್ಬರಲ್ಲೂ ಪವಿತ್ರತೆ ಅಂತಸ್ಥವಾಗಿದೆ. ಅದಕ್ಕೆ ಕವಿದ ಮೋಡವನ್ನು ಕರಗಿಸಲು ಸಾತ್ವಿಕತೆ ಬೇಕು. ನಮ್ಮ ಆತ್ಮವನ್ನು ಉದ್ಧರಿಸುವವರು ನಾವೇ. ಭಗವದ್ ಪ್ರಾಪ್ತಿಗೆ ಒಂದಷ್ಟು ನಿಷ್ಠೆ ಬೇಕು. ಸತ್ಯದ ಬೆಳಕಿನೆಡೆಗೆ ಕರೆದೊಯ್ಯುವ ದೊಡ್ಡ ಶಕ್ತಿಯೇ ಗುರು. ಬಲಿಷ್ಠವಾದ ಇಚ್ಛಾಶಕ್ತಿಯೂ ಗುರುವಾಗಬಲ್ಲುದು ಎಂದರು.
ಚಾತುರ್ಮಾಸ್ಯ ಅಂತಮುಖವಾಗದೇ ಬಹಿಮುಖವಾಗಬೇಕು ಎಂಬ ಕಾರಣಕ್ಕೆ ಚಾತುರ್ವಸ್ಯವನ್ನು ಎಲ್ಲೆಡೆ ಮಾಡುತ್ತಿದ್ದೇವೆ. ಚಾತುರ್ವಸ್ಯ ಸಂತೃಪ್ತಿಯನ್ನು ಕೊಟ್ಟಿದೆ. ನಾಮಧಾರಿ ಜನಾಂಗವನ್ನು ರಾಜ್ಯಕ್ಕೆ ಆದರ್ಶವಾಗುವಂತೆ ಚಾತುರ್ಮಸ್ಯ ಮಾಡಿದ್ದೀರಿ. ಭಟ್ಕಳದಲ್ಲೂ ಇತಿಹಾಸ ನಿರ್ವಿುಸಿದ್ದೀರಿ. ಯಾವ ಜನಾಂಗಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿದ್ದು ನಾಮಧಾರಿಯಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗಿದೆ ಎಂದರು.
ಈ ಭಾಗದ ಶಕ್ತಿ ನಮ್ಮನ್ನು ಎಳೆದುಕೊಂಡು ಬಂದು ಚಾತುರ್ವಸ್ಯ ನಡೆಸಿದೆ. ಇಲ್ಲಿ ಎಚ್.ಆರ್. ನಾಯ್ಕ ಎಂಬ ನಿಷ್ಕಲ್ಮಷ ವ್ಯಕ್ತಿ ಸಮಾಜವನ್ನು ಸಂಘಟಿಸಿ ಧರ್ಮ ಜಾಗೃತಿಯ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾರಾಯಣಗುರುಗಳ ಒಂದೇ ದೇವರು, ಒಂದು ಮತದ ತತ್ವವು ಕೋನಳ್ಳಿ ಚಾತುರ್ವಸ್ಯದಲ್ಲಿ ಸಾಕಾರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಭಕ್ತಿ ಹಾಗೂ ಧರ್ಮಕ್ಕಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ ಬ್ರಹ್ಮಾನಂದ ಶ್ರೀಗಳ ನೇತೃತ್ವದಲ್ಲಿ ಕೋನಳ್ಳಿಯಲ್ಲಿ ಪುಣ್ಯದ ಕೆಲಸಗಳು ನಡೆಯುತ್ತಿವೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕೋನಳ್ಳಿಯಲ್ಲಿ ಚಾತುರ್ವಸ್ಯ ವ್ರತಾಚರಿಸುವ ಶ್ರೀಗಳ ಸಂಕಲ್ಪ ನಿಜ ಅರ್ಥದಲ್ಲಿ ಯಶಸ್ವಿಯಾಗಿದೆ. ಚಿಕ್ಕ ಗ್ರಾಮದಲ್ಲಿ ಚಾತುರ್ವಸ್ಯ ನಡೆಯುತ್ತಿದ್ದರೂ ಇಡೀ ಸಮಾಜ ಎದ್ದು ನಿಂತು ಸಂಘಟಿತವಾಗಿರುವುದು ಅಧ್ಬುತವಾದದ್ದು ಎಂದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶ್ರೀಗಳ ಸಂದೇಶವನ್ನು ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರೂ ಪ್ರಯತ್ನಿಸಿದಾಗ ಮಾತ್ರ ಸನಾತನ ಹಿಂದು ಧರ್ಮ ಸರಿಯಾದ ಮಾರ್ಗದಲ್ಲಿ ಸಾಗಲಿದೆ ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ಭಟ್ಕಳ ಮಾಜಿ ಶಾಸಕ ಸುನಿಲ ನಾಯ್ಕ, ಉದ್ಯಮಿ ಮುರಳೀಧರ ಪ್ರಭು, ಸೂರಜ ನಾಯ್ಕ ಮಾತನಾಡಿದರು. ಆರ್ಯ ಈಡಿಗ ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಆರ್.ನಾಯ್ಕ, ನವೀನ ಪ್ರಕಾಶ ಬೆಳ್ತಂಗಡಿ, ಮಾಜಿ ಜಿಪಂ ಸದಸ್ಯ ರತ್ನಾಕರ ನಾಯ್ಕ, ಮಂಜುನಾಥ ಎಲ್ ನಾಯ್ಕ, ಗೋವಿಂದ ಪೂಜಾರಿ, ಪ್ರಶಾಂತ ನಾಯ್ಕ, ರಾಮಕ್ಷೇತ್ರ ಸಂಚಾಲಕ ಆಟೋ ಗಂಗಾಧರ, ಟ್ರಸ್ಟಿ ಚಿತ್ತರಂಜನ ಇತರರು ಇದ್ದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ದಂಪತಿಗಳು ಬ್ರಹ್ಮಾನಂದ ಶ್ರೀಗಳ ಪಾದಪೂಜೆ ನೆರವೇರಿಸಿದರು. ವೇ. ಲೋಕೇಶ ಸಂಗಡಿಗಳು ವೇದ ಘೊಷಗೈದರು. ಸುಧೀಶ ನಾಯ್ಕ ಸ್ವಾಗತಿಸಿದರು. ಎನ್.ಆರ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ನಾಯ್ಕ ನಿರೂಪಿಸಿದರು.
ಕೋನಳ್ಳಿಯ ಚಾತುರ್ವಸ್ಯ ತಾಣಕ್ಕೆ ಆಗಮಿಸುವುದಕ್ಕೂ ಮುನ್ನ ಬ್ರಹ್ಮಾನಂದ ಶ್ರೀಗಳು ಕುಮಟಾದ ನಾಮಧಾರಿ ಸಭಾಭವನದ ಶ್ರೀ ವೆಂಕಟೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಶ್ರೀಗಳನ್ನು ಭವ್ಯ ರಥದಲ್ಲಿ ಆಸೀನಗೊಳಿಸಿ ಕಾರು ಹಾಗೂ ಬೈಕ್ ರ್ಯಾಲಿಯೊಂದಿಗೆ ವಾದ್ಯಗೋಷ್ಠಿಯ ಜತೆ ಕೋನಳ್ಳಿಗೆ ಕರೆತರಲಾಯಿತು.