

ಮೈಸೂರು: ವೈಜ್ಞಾನಿಕ, ವೈಚಾರಿಕ ಮನೋಭಾವ ಮೈಗೂಡಿಸಿಕೊಳ್ಳುವ ಮೂಲಕ ರಾಷ್ಟ್ರಕವಿ ಕುವೆಂಪು ಅವರ ‘ವಿಶ್ವಮಾನವ’ ಕನಸನ್ನು ನನಸು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.
ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು ‘ವಿಶ್ವಮಾನವ’ ಕನಸು ಕಂಡಿದ್ದರು. ಆದರೆ, ‘ಮನುಷ್ಯ ಹುಟ್ಟುತ್ತ ವಿಶ್ವಮಾನವನಾಗಿದ್ದರೂ, ಬೆಳೆಯುತ್ತ ಅಲ್ಪಮಾನವನಾಗುತ್ತಾನೆ’ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾವುಗಳೆಲ್ಲ ಸೇರಿ ಕುವೆಂಪು ಅವರ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದರು.
ಕೆಲವರು ಸಮಾಜಗಳ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಾವುಗಳು ಮನುಷ್ಯ ಮನುಷ್ಯರನ್ನು ಪ್ರೀತಿಸುವುದನ್ನು ಕಲಿಯಬೇಕು. ಬಸವಣ್ಣ ಸಹ ‘ದಯವೇ ಧರ್ಮದ ಮೂಲವಯ್ಯ’ ಎಂದು ಪ್ರತಿಪಾದಿಸಿದ್ದಾರೆ. ಮನುಷ್ಯನ ಒಳಿತಿಗಾಗಿ ಇರುವುದೇ ಧರ್ಮ. ಧರ್ಮಕ್ಕಾಗಿ ಮನುಷ್ಯನಲ್ಲ. ಪ್ರತಿಯೊಬ್ಬರನ್ನೂ ಪ್ರೀತಿ, ದಯೆ, ಕರುಣೆಯಿಂದ ನೋಡುವುದು ಧರ್ಮ. ಇಲ್ಲವಾದರೆ ಅದು ಧರ್ಮವೇ ಅಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಓದು-ಬರಹ-ಮಾತುಗಾರಿಕೆಯೇ ವಿದ್ಯೆಯಲ್ಲ. ವೈಜ್ಞಾನಿಕ, ವೈಚಾರಿಕ ನಿಲುವುಗಳು, ಯೋಚನೆ ಕಲಿಸುವುದೇ ವಿದ್ಯೆ. ಆಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ. ವಿದ್ಯಾವಂತರು ಜಾತ್ಯತೀತವಾದಿಯಾಗಬೇಕು. ಜಾತಿವಾದಿಯಾದರೆ ಕಲಿತ ವಿದ್ಯೆಯೂ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.
ಮಹಿಳೆಯರು ಮತ್ತು ಶೂದ್ರರನ್ನು ಅಕ್ಷರ ಸಂಸ್ಕೃತಿಯಿಂದ ಹೊರಗಿಡಲಾಗಿತ್ತು. ಬ್ರಿಟಿಷರು ಬಂದ ಮೇಲೆ ಶಿಕ್ಷಣ ವ್ಯವಸ್ಥೆಯೇನೋ ಜಾರಿಗೆ ಬಂದರೂ ಎಲ್ಲರಿಗೂ ಕಲಿಯುವ ಅವಕಾಶ ದೊರೆತಿರಲಿಲ್ಲ. ಸಂವಿಧಾನ ಜಾರಿಯಾದ ಬಳಿಕ ಎಲ್ಲರಿಗೂ ಶಿಕ್ಷಣ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿತು. ಸಮಾಜದಲ್ಲಿರುವ ಎಲ್ಲ್ಲರಿಗೂ ವಿದ್ಯೆ ಸಿಕ್ಕರೆ ಮಾತ್ರ ಜ್ಞಾನ ಬೆಳೆಯಲು ಸಾಧ್ಯ. ಶಿಕ್ಷಣ ಸಿಗದಿದ್ದರೆ ಯೋಚನೆ ಬೆಳೆಯಲು, ಸ್ವಾಭಿಮಾನಿ, ಜ್ಞಾನಿಯಾಗಲು ಸಾಧ್ಯವಾಗುವುದಿಲ್ಲ ಎಂದು ಸಿಎಂ ತಿಳಿಸಿದರು.
ಸಂವಿಧಾನದ ಪೀಠಿಕೆ ಅರ್ಥೈಸಿಕೊಳ್ಳಬೇಕು. ಸಂವಿಧಾನವನ್ನು ಓದಿ ಅದರ ಧ್ಯೇಯ-ಉದ್ದೇಶವನ್ನು ಜಾರಿಗೆ ತರಲು ಪ್ರಯತ್ನಿಸಬೇಕು. ವಿವಿಧ ಜಾತಿ, ಧರ್ಮಗಳಿರುವ ವೈವಿಧ್ಯತೆಯ ಭಾರತದಲ್ಲಿ ಏಕತೆ ಕಾಪಾಡಬೇಕು. ನಾವುಗಳೆಲ್ಲ ಆಕಸ್ಮಿಕವಾಗಿ ಒಂದು ಜಾತಿ, ಧರ್ಮದಲ್ಲಿ ಹುಟ್ಟಿದ್ದೇವೆ. ಆದರೆ, ಮನುಷ್ಯತ್ವವನ್ನು ಎಂದಿಗೂ ಮರೆಯಬಾರದು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಸರ್ಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದು ನಾನು ಎಂದು ಹೇಳಿದರು.
ಈ ಹಿಂದಿನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನನ್ನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ಬೇರೆ ರಾಜಕಾರಣಿಗಳಿಗಿಂತ ನನಗೆ ಹೆಚ್ಚು ಪ್ರೀತಿ ತೋರುತ್ತಿದ್ದರು. ಅವರ ಕಾಲದಲ್ಲಿ ಆದಿಚುಂಚನಗಿರಿ ಮಠಕ್ಕೆ ಹೆಚ್ಚು ಹೋಗುತ್ತಿದ್ದೆ. ಈಗ ಕಡಿಮೆಯಾಗಿದೆ. ಈಗಿನ ಸ್ವಾಮೀಜಿಯವರು ಕರೆದರೆ ಮಠಕ್ಕೆ ಭೇಟಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಆದಿಚುಂಚನಗಿರಿ ಮಠ ಪ್ರಾಚೀನ ಧಾರ್ಮಿಕ ಕ್ಷೇತ್ರ. 1800 ವರ್ಷಗಳ ದೊಡ್ಡ ಚರಿತ್ರೆ ಇದೆ. ಇದೀಗ ಇದು ಹೆಮ್ಮರವಾಗಿ ಬೆಳೆದಿದೆ. ಮಠದ ಬೆಳವಣಿಗೆಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾತ್ರ ಬಹಳ ದೊಡ್ಡದು. ಧಾರ್ಮಿಕ, ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಮಠ ವಿಸ್ತಾರವಾಗಿ ಅಭಿವೃದ್ಧಿ ಕಾಣಲು ಬಾಲಗಂಗಾಧರ ಶ್ರೀಗಳ ಶ್ರಮ ದೊಡ್ಡದು ಎಂದು ಸಿಎಂ ಸ್ಮರಿಸಿದರು.
ಶ್ರೀಮಠ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ, ಅಸಮಾನತೆಯಲ್ಲಿ ಸಿಲುಕಿರುವ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. 500 ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ, 1.50 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಎಲ್ಲ ಜಾತಿ, ಭಾಷಿಕರು ಕಲಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಥ ಪಂಥ ಜಾತಿ ರಹಿತ ಪಂಥ. ಜಾತಿ, ಧರ್ಮ ಮೀರಿದ ಜಾತ್ಯತೀತ ಪಂಥ. ಆದರೆ, ಜಾತಿಗಳನ್ನು ಸೃಷ್ಟಿ ಮಾಡಿ ಸಮಾಜವನ್ನು ವಿಂಗಡಣೆ ಮಾಡಲಾಗಿದೆ. ಸಾಮಾಜಿಕ, ಆರ್ಥಿಕ ಅಸಮಾನತೆ, ಮೇಲ್ವರ್ಗ-ಕೆಳವರ್ಗ ಎನ್ನುವ ವ್ಯವಸ್ಥೆ ಇದೆ. ಇದರ ನಿರ್ಮೂಲನೆಗೆ ನಾಥ ಪಂಥ ಶ್ರಮಿಸಿತು. ಇಂತಹ ಪರಂಪರೆಗೆ ಶ್ರೀಮಠ ಸೇರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಠದ ಆವರಣದಲ್ಲಿರುವ ಬಿಜಿಎಸ್ ಸಾಂಸ್ಕೃತಿಕ ಭವನ, ಉಚಿತ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಲಾಯಿತು. ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಮುಕ್ತಿದಾನಂದಜೀ, ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮಿ, ಮೇಯರ್ ಶಿವಕುಮಾರ್, ಉಪಮೇಯರ್ ಜಿ.ರೂಪಾ, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ರಮೇಶ್ ಬಾಬು ಬಂಡೀಸಿದ್ದೇಗೌಡ, ದರ್ಶನ್ ಧ್ರುವನಾರಾಯಣ, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ಸಿ.ಎನ್.ಮಂಜೇಗೌಡ, ದಿನೇಶ್‌ಗೂಳಿಗೌಡ ಇತರರು ಇದ್ದರು.