

ಮೈಸೂರು: ಅಧಿಕಾರದಲ್ಲಿದ್ದಾಗ ಮಾಡಿದ ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯುವಂತಾದಾಗ ಮಾತ್ರ ನಮ್ಮ ಕೆಲಸ ಪರಿಪೂರ್ಣಗೊಳ್ಳಲು ಸಾಧ್ಯ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು.
ವಿಜಯನಗರ 2ನೇ ಹಂತದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳಾ ಅಭಿವೃದ್ಧಿ ನಿಗಮಕ್ಕೆ 95 ಕೋಟಿ ರೂ.ಅನುದಾನ ನೀಡಲಾಗಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ತರಲಾಗಿದೆ. ಅವುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.
ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಜನರಿಗೆ ಸಹಕಾರ ನೀಡಬೇಕು, ಉತ್ತಮ ಕೆಲಸ ಮಾಡುವ ಮೂಲಕ ಅವರ ಮೆಚ್ಚುಗೆ ಗಳಿಸಬೇಕಲ್ಲದೆ, ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಬೇಕು ಎಂದರು.
ಸರ್ಕಾರ ಮಹಿಳೆಯರಿಗಾಗಿ ಇಟ್ಟಿರುವ ಅನುದಾನವನ್ನು ನಿಗದಿತವಾಗಿ ಬಳಸಿಕೊಳ್ಳಲು ಅಗತ್ಯ ದಾಖಲೆ ನೀಡಬೇಕು, ಜಿಲ್ಲಾಧಿಕಾರಿ ಮೂಲಕ ಗುರುತಿನ ಚೀಟಿ ಪಡೆದುಕೊಳ್ಳಬೇಕು, ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಸ್ವಯಂಸೇವಾ ಸಂಸ್ಥೆ ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಸ್ತ್ರೀಶಕ್ತಿ ಆರಂಭಿಸಿದ್ದು, ಇಂದು ಬಹಳಷ್ಟು ಜನ ಅದರಿಂದ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ ಎಂದರು.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಲೀಡ್ ಬ್ಯಾಂಕ್ ಸಮಸ್ಯೆ ಕಂಡುಬರುತ್ತಿದ್ದು, 58 ಕೋಟಿ ರೂ. ಸಬ್ಸಿಡಿ ಜಿಲ್ಲಾಡಳಿತದಲ್ಲಿಯೇ ಉಳಿದಿದೆ. ಹಾಗಾಗಿ ನಿಗಮದಿಂದ ನೇರವಾಗಿ ಸಾಲ ನೀಡಿ, ವಸೂಲಿ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ವರ್ಷ ಕಾರ್ಯರೂಪಕ್ಕೆ ಬರುತ್ತದೆ. ಮೈಕ್ರೋ ಫೈನಾನ್ಸ್‌ಗೆ ಮಹಿಳೆಯರು ಜೋತು ಬೀಳದೆ ಸರ್ಕಾರಿ ಸೌಲಭ್ಯವನ್ನು ಬಳಸಿಕೊಳ್ಳಿ ಎಂದರು.
ವಿವಿಧ ಯೋಜನೆಗಳ ಅಡಿಯಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಸಂಗ್ರಹಿಸಿ ನೀಡಿದರೆ ಅದನ್ನು ಲೀಡ್ ಬ್ಯಾಂಕ್‌ನೊಂದಿಗೆ ಸಭೆ ನಡೆಸಿ ಎಲ್ಲ ಅರ್ಜಿದಾರರಿಗೂ ಸಾಲ ದೊರೆಯುವಂತೆ ಮಾಡಲಾಗುವುದು. ಸರ್ಕಾರಿ ಕೆಲಸ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕಾಗ ಅದನ್ನು ಅಧಿಕಾರಿಗಳು ಧನಾತ್ಮಕವಾಗಿ ಬಳಸಿಕೊಂಡು, ಪ್ರಾಮಾಣಿಕವಾಗಿ ಜನಸಾಮಾನ್ಯರಿಗಾಗಿ ಕೆಲಸ ಮಾಡಿಸಿಕೊಡಬೇಕು ಎಂದು ಹೇಳಿದರು.
ಲೀಡ್ ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ಪ್ರದೀಪ್ ಮಾತನಾಡಿ, ಮುಂದಿನ ವಾರದಲ್ಲಿ ತಾಲೂಕು ಮಟ್ಟದ ಪ್ರತಿನಿಧಿಗಳೊಂದಿಗೆ ಸಭೆಯ ಮೂಲಕ ಸಮಾಲೋಚನೆ ನಡೆಸಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸ್ತ್ರೀಯರಿಗೆ ಸಹಕಾರಿಯಾಗುವಂತಹ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಅದನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಬಿ.ಬಸವರಾಜು ಮಾತನಾಡಿ, ಉದ್ಯೋಗಚೇತನ, ಲಿಂಗತ್ವ ಅಲ್ಪಸಂಖ್ಯಾತರಿಗೆ ಯೋಜನೆ ಅನುಷ್ಠಾನ ಮಾಡಲಾಗಿದೆ. ಬ್ಯಾಂಕ್‌ಗಳು ಶೀಘ್ರವಾಗಿ ಸಾಲ ಮಂಜೂರಾತಿ ಮಾಡಿಕೊಡಬೇಕು. ಸಾಲ ಮಂಜೂರಾಗದೆ ಉದ್ಯೋಗಿನಿ ಯೋಜನೆ ತಡವಾಗುತ್ತಿದೆ ಎಂದರು.
ಆನಂದ ಜ್ಯೋತಿ ನೆಟ್‌ವರ್ಕ್‌ನ ಮಹಾದೇವ, ಆಶೋದಯ ಸಂಸ್ಥೆಯ ಸುಧಾ, ಹೇಮಲತಾ, ಪ್ರಣತಿ ಪ್ರಕಾಶ್, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ ಇತರರು ಇದ್ದರು.
ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಹಾಕಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳಾ ಫಲಾನುಭವಿಗಳಿಗೆ ಫಲಾನುಭವಿ ಪತ್ರ ವಿತರಿಸಲಾಯಿತು.