

ಪಾಂಡವಪುರ : ಡಾ.ವಿಷ್ಣುವರ್ಧನ್ ಅವರ ನಟನೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದು, ಅವರ ಅಭಿನಯನದ ಪ್ರತಿಯೊಂದು ಸಿನಿಮಾಗಳು ಸಮಾಜ ಪರಿವರ್ತನೆಯ ಹಾದಿಯಲ್ಲಿದ್ದವು ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಪಟ್ಟಣದ ಕಾಮನಚೌಕದಲ್ಲಿ ವಿಷ್ಣು ಸೇನಾ ಸಮಿತಿ ವತಿಯಿಂದ ಆಯೋಜಿಸಿದ್ದ 15 ವರ್ಷದ ಪುಣ್ಯ ಸ್ಮರಣೆ ಹಾಗೂ ವಿಷ್ಣುವರ್ಧನ್ ಅವರ ಭಾವವಿತ್ರವಿದ್ದ 2025ರ ದಿನ ದರ್ಶಿಕೆಯನ್ನು ಸೋಮವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿಷ್ಣುವರ್ಧನ ಅವರ ಅಭಿನಯ ಜನರ ಮನಸ್ಸಿಗೆ ಹತ್ತಿರವಾಗಿರುತ್ತಿತ್ತು. ವಿಷ್ಣುವರ್ಧನ್ ಅವರು ಮೇಲುಕೋಟೆ ಕ್ಷೇತ್ರದ ಸುಪುತ್ರರಾಗಿದ್ದು, ಮೇಲುಕೋಟೆ ಚಲುವನಾರಾಯಣಸ್ವಾಮಿ ಅವರ ಮನೆ ದೇವರು. ಹೀಗಾಗಿ ಅವರು ಮೇಲುಕೋಟೆ ಅಭಿವೃದ್ಧಿ ಆಗಬೇಕು ಎಂದು ತಮ್ಮ ಮನಸ್ಸಿನ ಇಂಗಿತವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರು. ಕ್ಷೇತ್ರದ ಶಾಸಕ ಮತ್ತು ಸಚಿವನಾಗಿ ಕೆಲಸ ಮಾಡುವ ವೇಳೆ ಅವರ ಆಶಯದಂತೆ ಮೇಲುಕೋಟೆಯನ್ನು ಅಭಿವೃದ್ಧಿಪಡಿಸಿದ್ದೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಹೆಚ್ಚು ಆಸಕ್ತಿ ವಹಿಸಿದೆ ಎಂದು ಆಶಿಸಿದರು.
ವಿಷ್ಣುಸೇನಾ ಸಮಿತಿ ಜಿಲ್ಲಾಧ್ಯಕ್ಷ ವಿಷ್ಣು ವಿಠಲ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಹಿರೇಮರಳಿ ದೊರೆಸ್ವಾಮಿ, ಟೀ ಅಂಗಡಿ ಮಾಮು, ಮರಿಯಪ್ಪ, ಅಜಯ್, ಶ್ರೀಧರ್, ಧರ್ಮ, ಶಶಿ ಇತರರು ಇದ್ದರು.