

ಮದ್ದೂರು: ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತದಾನ ಶಿಬಿರಗಳು ಜರುಗುತ್ತಿದ್ದು ಅದರಲ್ಲೂ ಮದ್ದೂರು, ಮಳವಳ್ಳಿ ತಾಲೂಕುಗಳು ಮುಂಚೂಣಿ ಸ್ಥಾನದಲ್ಲಿದ್ದು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸುತ್ತಿರುವ ಯುವಕರಿಗೆ, ಸಂಘ- ಸಂಸ್ಥೆಗಳು ಮತ್ತಷ್ಟು ಪ್ರೇರಣೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜು ಆವರಣದಲ್ಲಿ ತಾಲೂಕಿನ 70ಕ್ಕೂ ಹೆಚ್ಚು ವಿವಿಧ ಸಂಘ- ಸಂಸ್ಥೆಗಳ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶ ಕಾಯುವ ಯೋಧರ ಗೌರವಾರ್ಥ ಮತ್ತು ಹುತಾತ್ಮ ಯೋಧರ ಸ್ಮರಣಾರ್ಥ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಶ್ರಮಿಸುತ್ತಿದ್ದು, ಇದರೊಟ್ಟಿಗೆ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಕಳೆದ ಹಲವು ದಿನಗಳಿಂದಲೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ ನೂರಾರು ಜನರು ರಕ್ತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಶ್ರಮಿಸಿರುವುದು ಸಂತಸದ ಸಂಗತಿ ಎಂದರು.
ತಾಲೂಕಿನ ವಿವಿಧೆಡೆಗಳಿಂದ ಬಂದಿದ್ದ 200ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪ್ರಾಂಶುಪಾಲ ಕೆ.ಬಿ.ನಾರಾಯಣ್, ಶಿಬಿರದ ಆಯೋಜಕ ಕೃಷ್ಣ, ರೋಟರಿ ಸಂಸ್ಥೆ ಅಧ್ಯಕ್ಷ ಚನ್ನಂಕೇಗೌಡ, ವಿವಿಧ ಸಂಘಟನೆ ಪದಾಧಿಕಾರಿಗಳಾದ ವಿ.ಕೆ.ಜಗದೀಶ್, ಲಿಂಗನದೊಡ್ಡಿ ರಾಮಕೃಷ್ಣ, ಲೋಕೇಶ್, ಪೊಲೀಸ್ ಸಿದ್ದರಾಜು, ತೈಲೂರು ರಘು, ತಿಪ್ಪೂರು ರಾಜೇಶ್ ಹಾಗೂ ಶಿವಕುಮಾರ್, ಗಣೇಶ, ನವೀನ್, ಶಿವಪ್ರಸಾದ್, ಅನಿ, ರಾಜೇಶ್, ಕೀರ್ತಿ, ಯೋಗ, ಪತ್ರಕರ್ತರಾದ ಎಂ.ಪಿ.ವೆಂಕಟೇಶ್, ಎಂ.ಆರ್.ಚಕ್ರಪಾಣಿ, ಸಿ.ಹರೀಶ್ ಮತ್ತಿತರರಿದ್ದರು.