ಕಲೆ ಉಳಿಸಿ ಬೆಳೆಸುವ ಕೆಲಸ ಮುಂದುವರಿಯಲಿ

17-GPT-1
ಗುಂಡ್ಲುಪೇಟೆ ಶಿಕ್ಷಕರ ಭವನದಲ್ಲಿ ರಾಚಪ್ಪಾಜಿ ಜಾನಪದ ಕಲಾ ಸಂಘದ ವತಿಯಿಂದ ತಂಬೂರಿ ಕಲಾವಿದ ದಿ.ಕೆ.ಬಿ.ರಾಚಯ್ಯ ಅವರ 25ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕಲಾವಿದರನ್ನು ಸನ್ಮಾನಿಸಲಾಯಿತು.
Published on

ಗುಂಡ್ಲುಪೇಟೆ: ಆಧುನಿಕ ತಂತ್ರಜ್ಞಾನ ಯುಗದ ಭರಾಟೆಯಲ್ಲಿಯೂ ಜನಪದ ಕಲೆಯನ್ನು ಉಳಿಸಿ ಬೆಳೆಸುವಂತಹ ಕೆಲಸ ಮುಂದುವರಿಸಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಇಂದುವಾಡಿ ವೆಂಕಟೇಶ್ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ರಾಚಪ್ಪಾಜಿ ಜಾನಪದ ಕಲಾ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಆಕಾಶವಾಣಿ ಎ’ ಗ್ರೇಡ್ ತಂಬೂರಿ ಕಲಾವಿದ ದಿ. ಕೆ.ಬಿ.ರಾಚಯ್ಯ ಅವರ 25ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಎಂದೂ ಸಾವಿಲ್ಲ. ನಾಡಿನಾದ್ಯಂತ ತಮ್ಮ ಕಲೆಯನ್ನು ಪಸರಿಸಿರುವ ತಂಬೂರಿ ಕಲಾವಿದ ಕೆ.ಬಿ.ರಾಚಯ್ಯ ಈ ಮಣ್ಣಿನ ವರಪ್ರಸಾದವಾಗಿದ್ದರು. ಅವರ ಪುತ್ರ ಸಿದ್ದರಾಜು ಸಹ ತಂಬೂರಿ ಕಲಾವಿದರಾಗಿ ತಂದೆಯವರ ಹಾದಿಯಲ್ಲಿ ಮುಂದುವರಿಯುತ್ತಿರುವುದು ಶ್ಲಾಘನಿಯ ಎಂದು ಹೇಳಿದರು.

ಜಾನಪದ ಅಕಾಡೆಮಿ ಸದಸ್ಯ ಉಮೇಶ್ ಮಾತನಾಡಿ, ಪವಾಡ ಪುರುಷರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರ ಸ್ವಾಮಿ ನೆಲೆ ನಿಂತಿರುವ ನಾಡು ಚಾಮರಾಜನಗರ, ಮಂಡ್ಯ, ಮೈಸೂರು. ಈ ನೆಲವು ಸಾಕಷ್ಟು ಕಲಾವಿದರನ್ನು ಹುಟ್ಟುಹಾಕಿ ರಾಷ್ಟಾದ್ಯಂತ ಈ ನಾಡಿನ ಕಲೆ, ಸಂಸ್ಕೃತಿಯನ್ನು ಪಸರಿಸಿದೆ ಎಂದರು.

ರಾಜ್ಯ ಪ್ರಶಸ್ತಿ ವಿಜೇತರಾದ ದೊಡ್ಡ ಗವಿಬಸಪ್ಪ, ತಂಬೂರಿ ಕಲಾವಿದರಾದ ಸಿದ್ದರಾಜು, ಸಿದ್ದಶೆಟ್ಟಿ, ನಾಗಯ್ಯ, ಸಿದ್ದರಾಜು, ಸಿದ್ದಯ್ಯ, ಗುರುಸಿದ್ಧಯ್ಯ, ಮಹದೇವನಾಯಕ, ಸಿದ್ದರಾಜು, ರಘು, ಕೈಲಾಸಮೂರ್ತಿ, ಶಿವಕುಮಾರ್, ಶ್ರೀನಿವಾಸ, ಮಾದಯ್ಯ, ಹರಳುಕೂಟಯ್ಯ, ಬಸವರಾಜು, ಸೋಬಾನೆ ಕಲಾವಿದರಾದ ದೊಡ್ಡಮ್ಮ, ಬೆಳ್ಳಮ್ಮ, ವೆಂಕಟಮ್ಮ, ಲಕ್ಷ್ಮಮ್ಮ, ರಾಜಮ್ಮ ಅವರನ್ನು ಸನ್ಮಾನಿಸಲಾಯಿತು.

ಶ್ರೀಕ್ಷೇತ್ರ ಚಿಕ್ಕಲ್ಲೂರಿನ ಭಾರತ್ ಪ್ರಭುರಾಜೇ ಅರಸು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಉಪ ಖಜಾನಾಧಿಕಾರಿ ಪಿ.ನಾಗರತ್ನಮ್ಮ, ಜಾನಪದ ಅಕಾಡೆಮಿ ಸದಸ್ಯ ಉಮೇಶ್, ರಾಚಪ್ಪಾಜಿ ಜಾನಪದ ಕಲಾ ಸಂಘದ ಅಧ್ಯಕ್ಷ ಆರ್. ಸಿದ್ದರಾಜು, ಸೋಬಾನೆ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net