

ಕಡೂರು: ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದು ಹಾಕಿ ಸಮ ಸಮಾಜವನ್ನು ನಿರ್ಮಿಸುವುದೇ ಕನಕದಾಸರ ಮುಖ್ಯ ಆಶಯವಾಗಿತ್ತು ಎಂದು ಕಾರ್ಮಿಕ ಸಚಿವ ಎಸ್. ಸಂತೋಷ್ ಲಾಡ್ ಹೇಳಿದರು.
ಯಗಟಿ ಗ್ರಾಮದಲ್ಲಿ ತಾಲೂಕು ಪ್ರದೇಶ ಕುರುಬರ ಸಂಘದಿಂದ ಏರ್ಪಡಿಸಿದ್ದ 537ನೇ ಕನಕ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾನವ ಧರ್ಮಉದ್ದಾರವಾಗ ಬೇಕು ಎಂಬ ಪರಿಕಲ್ಪನೆಯಲ್ಲಿ ಬಸವಾದಿ ಶರಣರು ಹಾಗೂ ದಾಸರ ಆಶಯ ಒಂದೇ ಆಗಿದ್ದವು. ಆದರೆ ಇಂದಿಗೂ ಜಾತಿಯತೆಯಲ್ಲಿಯೇ ವ್ಯವಸ್ಥೆ ಒಗ್ಗಿಕೊಂಡಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದರು.
ಎಲ್ಲರ ಶ್ರೇಯೋಭಿವೃದ್ಧಿಗೆ ಚಿಂತನೆ ನಡೆಸುವ ಹಾಲಮತ ಸಮಾಜಕ್ಕೆ ಇಂದಿನ ಶಕ್ತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆಗಳು ಶೋಷಿತ ಸಮಾಜಗಳಿಗೂ ಬದುಕು ಕಟ್ಟಿಕೊಳ್ಳುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ದೇಶದ ಯಾವ ರಾಜ್ಯದಲ್ಲೂ ನೀಡದಂತಹ ಯೋಜನೆಗಳನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಬಡವರ ಬದುಕಿಗೆ ಆಶಾಕಿರಣವಾಗುವ ಜತೆಗೆ ಆರ್ಥಿಕತೆಯ ಜಿಡಿಪಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ ಎಂದರು.
ಕಾಗಿನೆಲೆಯ ಕೆ.ಆರ್.ನಗರ ಶಾಖಾ ಮಠದ ಶ್ರೀಶಿವಾನಂದಪುರಿ ಸ್ವಾಮೀಜಿ, ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಸಂಸದ ಶ್ರೇಯಸ್‌ಪಟೇಲ್, ಯರದಕೆರೆ ಓಂಕಾರ್ ಮತ್ತಿತರಿದ್ದರು.