

ಕುಂದಾಪುರ: ಶ್ರೀ ಸಂಸ್ಥಾನಕ್ಕೆ ಶಿಷ್ಯವೃಂದವೇ ಅತಿ ದೊಡ್ಡ ಆಸ್ತಿ. ಪ್ರತಿ ಶಿಷ್ಯನೂ ಸಂಸ್ಥಾನದೊಂದಿಗೆ ಇರುವ ಸಂಬಂಧ ಕಡಿದುಕೊಳ್ಳಬಾರದು. ಪೂರ್ವಜರು ಉಳಿಸಿದ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನಾವು ಮುಂದುವರಿಸಬೇಕು. ಸಂಸ್ಥಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಆಶೀರ್ವಚನ ನೀಡಿದರು.
ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ಸ್ವೀಕಾರದ ಮಹಾಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಸುಧೀಂದ್ರ ತೀರ್ಥ ಸ್ವಾಮಿಗಳ ಜನ್ಮಶತಮಾನೋತ್ಸವ ಸಂದರ್ಭ ನೂರು ದಿನಗಳ ಅಖಂಡ ಭಜನೆ ಹಮ್ಮಿಕೊಂಡಿರುವುದು ಹಿರಿಯರ ತ್ಯಾಗದ ಫಲ ಎಂದರು.
ಕರ್ನಾಟಕ, ಕೇರಳ, ಮಹಾರಾಷ್ಟ್ರದ ಸುಮಾರು 150ಕ್ಕೂ ಹೆಚ್ಚಿನ ಮಂದಿ ಸಂಯಮೀಂದ್ರ ಶ್ರೀಗಳಿಗೆ ಹಾರಾರ್ಪಣೆ ಮಾಡಿದರು. ಚಾರ್ತುರ್ಮಾಸ ವೃತ ಸ್ವೀಕಾರ ನಿಮಿತ್ತ ಸಂಸ್ಥಾನದ ದೇವರಿಗೆ ಪಂಚಾಮೃತ ಅಭಿಷೇಕ, ನೂರೆಂಟು ಸಿಯಾಳ ಅಭಿಷೇಕ, ಪವಮಾನ ಅಭಿಷೇಕ, ಶತಕಲಶಾಭಿಷೇಕ, ಕನಕಾಭಿಷೇಕ, ಋತ್ ಸಂಹಿತಾಭಿಷೇಕ ನೆರವೇರಿತು. ಬಳಿಕ ಸ್ಥಳೀಯರಿಗೆ ತಪ್ತ ಮುದ್ರಾಧಾರಣೆ, ವಿಶೇಷ ಪುಷ್ಪಾಲಂಕರ ಮೃತ್ತಿಕಾ ಪೂಜನೆ ನೆರವೇರಿದವು. ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ ಜಿ. ಕಾಮತ್ ಸ್ವಾಗತಿಸಿದರು.