

ಸಿದ್ದಾಪುರ: ಧಾರ್ಮಿಕ ಆಚರಣೆಯಿಂದ ಮಾತ್ರ ಜೀವನ ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಅವಕಾಶ ಮನುಷ್ಯನಿಗೆ ಮಾತ್ರ ಪ್ರಾಪ್ತವಾಗಿದೆ ಎಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರು ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಬುಧವಾರ ಶ್ರೀಮನ್ಮಹಾರಥೋತ್ಸವ ಸಮರ್ಪಣಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನೂತನ ಮನ್ಮಹಾಸ್ಯಂದನದಲ್ಲಿ ಭಗವಂತನು ರಥಾರೂಢರಾಗಿರುವುದು, ರಥೋತ್ಸವ ಪ್ರಾರಂಭವಾಗಿರುವುದು ಹಾಗೂ ಮುಂದೆ ದೀರ್ಘಕಾಲ ಶ್ರೀದೇವರಿಗೆ ರಥೋತ್ಸವ ನಡೆಯುವುದು ಸಂತಸದ ವಿಷಯ. ಹೊಸದಾಗಿ ಆರಂಭಮಾಡಬೇಕಾದದ್ದು ಯಾವುದೂ ಇಲ್ಲ. ಹಿಂದಿನಿಂದ ನಡೆಸಿಕೊಂಡು ಬಂದಿರುವ ಆಚರಣೆ ಮಾಡಿದರೂ ಜೀವನ ಸಾರ್ಥಕ ಮಾಡಿಕೊಳ್ಳಬಹುದು ಎಂದರು.
ಶ್ರೀ ಮಾಧವಾನಂದ ಭಾರತಿ ಸ್ವಾಮಿಗಳು ಆಶೀರ್ವಚನ ನೀಡಿ, ಧರ್ಮಮಾರ್ಗದಲ್ಲಿ ನಡೆಯುವುದರಿಂದ ಮೋಕ್ಷ ಸಾಧನೆಗೆ ದಾರಿಯಾಗುತ್ತದೆ. ಇದಕ್ಕೆ ಗುರುವಿನ ದರ್ಶನ, ಮಾರ್ಗದರ್ಶನ ಬೇಕಾಗುತ್ತದೆ ಎಂದರು.
ಸ್ವರ್ಣವಲ್ಲಿ ಶ್ರೀ ಆಶೀರ್ವಚನ:
ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಠಕ್ಕೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಮಂಗಳವಾರ ಆಗಮಿಸಿ ನೂತನ ರಥ ವೀಕ್ಷಿಸಿ ಮಂತ್ರಾಕ್ಷತೆ ಅರ್ಪಿಸಿ ಆಶೀರ್ವಚನ ನೀಡಿದರು. ಉಪನಿಷತ್ತು ಹಾಗೂ ಶಾಸ್ತ್ರಗಳಲ್ಲಿ ರಥದ ವರ್ಣನೆ ಇದೆ. ಮಾನವ ಶರೀರಕ್ಕೂ - ರಥಕ್ಕೂ ಸಾಮ್ಯತೆಯಿದೆ. ಗರ್ಭಗುಡಿಯಲ್ಲಿ ಇದ್ದ ದೇವರನ್ನು ಅತ್ಯಂತ ಹತ್ತಿರದಿಂದ ನೋಡುವ ಭಾಗ್ಯ ಲಭಿಸುವುದು ರಥೋತ್ಸವದ ಸಂದರ್ಭದಲ್ಲಿ. ರಥವನ್ನು ಎಳೆಯುವುದರಿಂದ ಪುಣ್ಯ ಲಭಿಸುತ್ತದೆ. ನೂತನ ರಥದಲ್ಲಿ ಲಕ್ಷ್ಮೀ ನರಸಿಂಹ ದೇವರು ಆರೂಢರಾಗಿ ಸಮಸ್ತ ಭಕ್ತರನ್ನು ಹರಸಲಿದ್ದಾರೆ ಎಂದರು.
ನೂತನ ರಥ ಸಮರ್ಪಣಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬುಧವಾರ ವಿವಿಧ ಪೂಜೆ, ಹೋಮ, ಬಲಿ, ರಥಾರೋಹಣ ನೆರವೇರಿತು.
ರಥಾರೂಢ ಶ್ರೀಲಕ್ಷ್ಮೀನೃಸಿಂಹ ದೇವರಿಗೆ ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳು ಪೂಜೆ ಸಲ್ಲಿಸಿದರು. ಮಾಧವಾನಂದ ಸ್ವಾಮೀಜಿ ಇತರರು ಇದ್ದರು.