ಸ್ವಾಮೀಜಿಗಳು ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡಲಿ

ksm 25-1
ಕೂಡಲಸಂಗಮ ಸಮೀಪದ ಚಿಟಿಗಿನಕೊಪ್ಪ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಆರೂಢ ವೈಭವ ಥೀಮ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿದರು. ಶಿವಾನಂದ ಭಾರತಿ ಮಹಾಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವೀಣಾ ಕಾಶಪ್ಪನವರ, ಚಿದಂಬರಾಶ್ರಮದ ಶಿವಕುಮಾರ ಇತರರಿದ್ದರು.
Published on

ಕೂಡಲಸಂಗಮ: ಸ್ವಾಮೀಜಿಗಳು ಧಾರ್ಮಿಕ ಕಾರ್ಯದೊಂದಿಗೆ ವಿಭಿನ್ನ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಿ ಆ ಕ್ಷೇತ್ರದಲ್ಲೂ ಸಾಧನೆ ಮಾಡಬೇಕೆಂದು ಶ್ರೀಶೈಲ ಪೀಠದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಸಮೀಪದ ಚಿಟಿಗಿನಕೊಪ್ಪ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಬುಧವಾರ ಆರೂಢ ವೈಭವ ಥೀಮ್ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.

ನಗರಗಳಿಗೆ ಸಿಮೀತವಾಗಿದ್ದ ಥೀಮ್ ಪಾರ್ಕ್‌ಗಳನ್ನು ಗ್ರಾಮೀಣ ಭಾಗದ ಜನರಿಗೆ ಕಲ್ಪಿಸುವ ಕಾರ್ಯವನ್ನು ಸದಾನಂದ ಸ್ವಾಮೀಜಿ ಮಾಡಿದ್ದಾರೆ. ನಮ್ಮ ಮಠದಿಂದ ಮುಂದಿನ ತಿಂಗಳು ಯಡಿಯೂರ ಕ್ಷೇತ್ರದಲ್ಲಿ ಥೀಮ್ ಪಾರ್ಕ್ ಅನಾವರಣ ಮಾಡುತ್ತೇವೆ. ಭಕ್ತರು ಬಿಡುವಿನ ವೇಳೆಯಲ್ಲಿ ಥೀಮ್ ಪಾರ್ಕ್‌ಗೆ ಭೇಟಿ ನೀಡಬೇಕು. ಮುಂದಿನ ದಿನದಲ್ಲಿ ಈ ಸ್ಥಳ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲಿದೆ ಎಂದರು.

ಇಂಚಲ ಶ್ರೀ ಸಾಧು ಸಂಸ್ಥಾನಮಠದ ಶಿವಾನಂದ ಭಾರತಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಉಪಯೋಗ, ದುರುಪಯೋಗ ಮಾಡಿಕೊಳ್ಳುವರು ಅಧಿಕವಾಗಿದ್ದಾರೆ. ಸದುಪಯೋಗ ಮಾಡಿಕೊಳ್ಳುವರ ಸಂಖ್ಯೆ ಕಡಿಮೆ ಇದೆ. ನಾವೆಲ್ಲರೂ ನೋಡಿ ಕಲಿಯುವವರಾಗಬೇಕು ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಭಕ್ತರಿಗೆ ಮನರಂಜನೆ ಅಗತ್ಯ ಇದ್ದು, ಭಕ್ತರ ಅಗತ್ಯಕ್ಕೆ ಅನುಗುಣವಾಗಿ ಥೀಮ್ ಪಾರ್ಕ್ ನಿರ್ಮಾಣಗೊಂಡಿದೆ ಎಂದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಥೀಮ್ ಪಾರ್ಕ್ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಈ ಭಾಗದಲ್ಲಿ ಮನರಂಜನೆಗಾಗಿ ಥೀಮ್ ಪಾರ್ಕ್ ಅಗತ್ಯ ಇತ್ತು. ಈ ಕಾರ್ಯವನ್ನು ಶ್ರೀಗಳು ಈಡೇರಿಸಿದ್ದಾರೆ. ಗ್ರಾಮೀಣ ಭಾಗದ ಜನರಿಗೂ ನಗರದ ಸೌಲಭ್ಯಗಳು ದೊರೆತಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದರು.

ಬೀದರ ಚಿದಂಬರಾಶ್ರಮದ ಶಿವಕುಮಾರ ಮಹಾಸ್ವಾಮೀಜಿ, ಬೀಲಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯರು,ನಿಡಗುಂದಿಯ ರುದ್ರಮುನಿ ಶಿವಾಚಾರ್ಯರು, ಹುಣಶ್ಯಾಳ ನಿಜಗುಣದೇವರು, ಮಂಟೂರ ಸಿದ್ಧಾರೂಢ ಮಠದ ಸದಾನಂದ ಸ್ವಾಮೀಜಿ, ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net