ಜ್ಞಾನಸೂರ್ಯ ಸದಾ ಬೆಳಗಲಿ

Siddeshwa Shree Pravachan Aug
Published on

ವಿಜಯಪುರ: ಭಾರತೀಯರು ಬೆಳಕನ್ನು ಪ್ರೀತಿಸುವವರು. ಬೆಳಕನ್ನು ಪ್ರೀತಿಸುವವರೆಲ್ಲ ಭಾರತೀಯರೇ. ಹಗಲು ಸೂರ್ಯಪ್ರಕಾಶ. ರಾತ್ರಿ ಚಂದ್ರ-ನಕ್ಷತ್ರಗಳ ಚಿತ್ತಾರ. ಮನೆಯಲ್ಲಿ ಹಣತೆಯ ಕಿರುಬೆಳಕು. ಹೀಗೆ ಭಾರತೀಯರು ಯಾವಾಗಲೂ ಬೆಳಕಿನಲ್ಲಿಯೇ ರಮಿಸುತ್ತಾರೆ. ಹಸಿವು ನೀಗಿಸುವ, ಅನ್ನವನ್ನು ಬೇಯಿಸಿಕೊಡುವ ಒಲೆಯನ್ನೂ ಅವರು ಪೂಜಿಸುತ್ತಾರೆ. ಒಂದು ದಿನ ಒಲೆ ಉರಿಯದಿದ್ದರೆ ಬದುಕು ಬರ್ಭರವಾಗುತ್ತದೆ. ಬೆಲೆ ಬಾಳುವ ಮುತ್ತು-ರತ್ನಗಳಿಗಿಂತ, ಸಣ್ಣ ಹಣತೆಗೆ ಅವರ ಪ್ರಾಶಸ್ತ್ಯ. ದೀಪ ಇಲ್ಲದಿದ್ದರೆ, ಕತ್ತಲೆಯಲ್ಲಿ ಮುತ್ತು-ರತ್ನ, ಬೆಳ್ಳಿ-ಬಂಗಾರಗಳು ಹೊಳೆಯುವವೇನು?

ಕತ್ತಲೆಯಲ್ಲಿನ ಬದುಕು ಭಯಾನಕ. ಕತ್ತಲೆ ದುಃಖಕ್ಕೆ ಕಾರಣ. ಬೆಳಕು ಭರವಸೆಯ ಕಿರಣ. ಅದು ಆನಂದಮಯ. ಧ್ವನಿಗಳೂ ಕೂಡ ಕತ್ತಲೆ-ಬೆಳಕುಗಳನ್ನು ಸೂಚಿಸುತ್ತವೆ. ಗೂಬೆ ಕೂಗಿದರೆ, ಕತ್ತಲಾಗಿದೆ ಎಂದರ್ಥ. ಕೋಳಿ-ಕೋಗಿಲೆಗಳು ಕೂಗು ಬೆಳಕಿನ ಸಂದೇಶ ನೀಡುತ್ತವೆೆ.

ಜ್ಞಾನ ಎಂದರೆ ಬೆಳಕು. ಅಜ್ಞಾನ ಕತ್ತಲೆಯ ರೂಪ. ಅದು ಬೆಳಕಿನ ಅನುಪಸ್ಥಿತಿ. ಕಣ್ಣು ಜಗತ್ತಿನ ರೂಪವನ್ನು ತೋರಿದರೆ; ಕಿವಿಗಳು ಶಬ್ದದರ್ಶನ ಮಾಡಿಸುತ್ತವೆ. ಬೆಳಕು-ಜ್ಞಾನಗಳಿಲ್ಲದ ಅಂಧಃಕಾರದ ಬದುಕು ಬದುಕೇ ಅಲ್ಲ! ಕಣ್ಣಲ್ಲಿ ತೇಜ, ಮುಖದಲ್ಲಿ ಕಳೆ ಇಲ್ಲದಿದ್ದರೆ ಅದ್ಯಾವ ಬದುಕು?! ವ್ಯಕ್ತಿ ಎಷ್ಟು ದೊಡ್ಡವನಾದರೇನು? ಎಷ್ಟು ಸಿರಿವಂತನಾದರೇನು? ಅವನ ಮುಖ ಸಿಂಡರಿಸಿಕೊಂಡಿದ್ದರೆ. ಗಂಟುಗಂಟಾಗಿದ್ದರೆ; ಅವನನ್ನು ಯಾರೂ ಇಷ್ಟಪಡುತ್ತಾರೆ? ಸಣ್ಣ ಮಗುವಿನ ಬೊಚ್ಚಬಾಯಿಯ ಕಿರುನಗು ಜಗತ್ತನ್ನೇ ಆನಂದಮಯಗೊಳಿಸಬಲ್ಲದು.

ನಗುಮುಖವೇ ಬೆಳಕು. ಅದುವೇ ಆನಂದಾಭಿವ್ಯಕ್ತಿ! ಅಳುವ ಮುಖ ದುಃಖವನ್ನು ಕತ್ತಲೆಯನ್ನು ಪ್ರತಿನಿಧಿಸುತ್ತದೆ. ಭಯ ಮತ್ತು ದುಃಖಗಳು ನಮ್ಮಲ್ಲಿ ಆತಂಕವನ್ನುಂಟುಮಾಡುತ್ತವೆ. ಕೋಟಿ ಕೋಟಿ ಖರ್ಚುಮಾಡಿ ದೊಡ್ಡ ಮನೆ ಕಟ್ಟಿದರೇನು, ಮನೆಯಲ್ಲಿ ಬೆಳಕಿಲ್ಲದಿದ್ದರೆ. ಚಿಕ್ಕ ಬೆಲೆಯ ಒಂದು ಸಣ್ಣ ಹಣತೆ ಆ ಮನೆಗೆ ಬೆಳಕು-ಮೆರಗು ಕೊಡುತ್ತದೆ. ಅದರ ವೈಭವವನ್ನು ಪ್ರಕಾಶಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net