

ಶಿರಸಿ: ಸಮಾಜದ ಸಮೃದ್ಧಿಗೆ ವೇದಾಧ್ಯಯನ, ವೇದಗಳಿಗೆ ಪೂರಕವಾದ ಯಜ್ಞ ಅನುಷ್ಠಾನ ಹೆಚ್ಚಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೂರು ದಿನಗಳ ದಕ್ಷಿಣ ಭಾರತ ಕ್ಷೇತ್ರೀಯ ವೇದ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪೂರ್ವಜರು ವೇದ ಉಳಿಸಿಕೊಟ್ಟಿದ್ದರಿಂದ ಈವರೆಗೂ ಆಹಾರ ಸಮಸ್ಯೆ ಆಗಲಿಲ್ಲ. ವೇದ, ಯಜ್ಞ, ಮಳೆ ಹಾಗೂ ಆಹಾರಕ್ಕೆ ನಿಕಟ ಸಂಬಂಧವಿದೆ. ವೇದ ಮತ್ತು ಯಜ್ಞ ಸಮೃದ್ಧವಾಗಿ ಆಚರಣೆ ಆಗಿದ್ದರೆ ಆಹಾರವೂ ಸಮೃದ್ಧ, ಬದುಕಿನಲ್ಲಿ ನೆಮ್ಮದಿ ಲಭಿಸುತ್ತದೆ. ಈಚೆಗೆ ವೇದ ಅಧ್ಯಯನ, ಯಜ್ಞಗಳ ಕೊರತೆಗಳ ಪರಿಣಾಮ ಕಾಡುತ್ತಿದೆ. ಯಜ್ಞಗಳ ಕೊರತೆಯಿಂದ ಮಳೆಯ ಕೊರತೆಗೂ ಕಾರಣವಾಗುತ್ತಿದೆ. ಆಹಾರ ಉತ್ಪಾದನೆಯಲ್ಲಿ ಅಪಾಯ ಆಗುತ್ತಿದೆ. ಭೂಮಿ ಕೂಡ ಬರಡಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವೇದಗಳ ಅಧ್ಯಯನದಿಂದ ಏನು ಮಹತ್ವ ಎನ್ನುವ ಕುರಿತು ಗೀತೆ ಕೂಡ ಹೇಳುತ್ತದೆ. ವೇದ ತಿಳಿದು ಯಜ್ಞ ಮಾಡಬೇಕು ಎಂದ ಶ್ರೀಗಳು, ವೇದಾಧ್ಯಯನ ನಡೆಸುವವರನ್ನು ಉತ್ತೇಜಿಸುವುದು ವೇದ ಸಮ್ಮೇಳನದ ಮೂಲ ಆಶಯ. ವೇದಗಳ ಅಧ್ಯಯನ ಜತೆಗೆ ವೇದ ಶಾಸ್ತ್ರ ಪಂಡಿತರ ಕೊರತೆ ಇದೆ. ಮಂತ್ರಗಳ ಬಳಕೆ ಜತೆಗೆ ಅದರ ಅರ್ಥ, ಜ್ಞಾನ ಇಟ್ಟುಕೊಳ್ಳಬೇಕು. ವೇದಗಳ ರಕ್ಷಣೆಗೆ ಹಿಂದಿನವರು ಮಾಡಿದ ತಪಸ್ಸು ಮನನ ಮಾಡಿಕೊಳ್ಳಬೇಕು. ವೇದ ಉಳಿಸಲು ಮುಂದಾದರೆ ಪರಂಪರೆಯ ಸಂರಕ್ಷಣೆ ಆಗುತ್ತದೆ ಎಂದರು.
ಕೂಡಲಿಮಠದ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವೇದ ವಿರೋಧಿ ಕಾನೂನು ಇಟ್ಟುಕೊಂಡು ವೇದಗಳ ಅಧ್ಯಯನ ಮಾಡುವುದು ಹೇಗೆ ? ಎಂಬುದನ್ನು ಚರ್ಚೆ ಮಾಡಬೇಕಾಗಿದೆ. ಸರ್ಕಾರದ ನೆರವು ಪಡೆದರೆ ವೇದಗಳ ಮೇಲೆ ಹೇರಿಕೆ ಆಗುತ್ತಿದೆಯಾ ಎಂಬ ಪ್ರಶ್ನೆ ಕೇಳಬೇಕಾಗಿದೆ. ಪರಂಪರೆಯ ಉಳಿವಿಗೆ ಸರ್ಕಾರದ ಅನುದಾನದ ಅಗತ್ಯ ಇದೆಯಾ? ಧರ್ಮದ ಆಚರಣೆಗೆ ಸಮಾಜದ ಕೊಡುಕೊಳ್ಳುವಿಕೆ ಆಗಬೇಕಿದೆ ಎಂದರು.
ಉಜ್ಜಯನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೋ. ಪ್ರಫುಲಕುಮಾರ ಮಿಶ್ರ ಮಾತನಾಡಿ, ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ವೇದ ಅಧ್ಯಯನಕ್ಕೆ ತೊಂದರೆ ಆದರೂ ಆಚಾರ್ಯರ ಪ್ರಭಾವದಿಂದ, ಮಠ ಮಂದಿರಗಳಿಂದ, ಸರ್ಕಾರದ ಸ್ಪಂದನೆಯಿಂದ ಉಳಿಸುವ ಕಾರ್ಯ ಮಾಡಲಾಗಿದೆ. ವೇದಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಉಜ್ಜಯನಿ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಕಾರ್ಯದರ್ಶಿ ಪ್ರೊ. ವಿರೂಪಾಕ್ಷ ಜಡ್ಡಿಪಾಲ ಮಾತನಾಡಿ, ವೇದ ಶಾಶ್ತ್ರಗಳಿಗೆ ಬಲ ಕೊಡುವುದೇ ಪ್ರತಿಷ್ಠಾನದ ಆಶಯ, ಉದ್ದೇಶ. ಮಣಿಪುರದಲ್ಲೂ, ಭೂಕಂಪದ ಅನೇಕ ಸ್ಥಳದಲ್ಲಿಯೂ, ಗೋವಾದಲ್ಲೂ ವೇದ ಅಧ್ಯಯನ ಮಾಡಿಸುತ್ತಿದ್ದೇವೆ. ಸರ್ಕಾರದ ವ್ಯವಸ್ಥೆ ಇಟ್ಟುಕೊಂಡು ವೇದ ಅಧ್ಯಯನ ಮಾಡಿಸುತ್ತಿದ್ದೇವೆ. ಸಣ್ಣ ಸಣ್ಣ ವೇದಾಧ್ಯಯನ ಕೇಂದ್ರಗಳಿಗೂ ಮಾನ್ಯತೆ ಸಿಗಬೇಕು. ಆ ಕೆಲಸ ಮಾಡಲಾಗುತ್ತಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಕಾ.ಈ. ದೇವನಾಥನ್ ಮಾತನಾಡಿ, ವೇದಾಧ್ಯಯನ, ಶಾಸ್ತ್ರ ಅಧ್ಯಯನ ಎರಡೂ ಮಾಡಬೇಕು. ವೇದ ಅಧ್ಯಯನ ಮಾಡುವವರ ಕೊರತೆ ಇದೆ. ಸಾಮವೇದ, ಯಜುರ್ವೆದ, ಅಥರ್ವ ವೇದ ಎಲ್ಲವನ್ನೂ ಓದಬೇಕು. ನಾಲ್ಕೂ ವೇದಗಳ ಅಧ್ಯಯನ ಒಂದೇ ಕಡೆಗೆ ಆಸಕ್ತ ಅಧ್ಯಯನಾರ್ಥಿಗಳಿಗೆ ಸಿಗಬೇಕು ಎಂದರು.
ಧಾತ್ರೀ ಫೌಂಡೇಷನ್ನ ಶ್ರೀನಿವಾಸ ಧಾತ್ರಿ ಮಾತನಾಡಿದರು. ಎಂ.ಜಿ. ಗಡಿಮನೆ ಸ್ವಾಗತಿಸಿದರು. ಜಿ.ವಿ. ಹೆಗಡೆ, ಶಿವರಾಮ ಭಟ್ಟ ಫಲ ಸಮರ್ಪಣೆ ಮಾಡಿದರು. ಇದೇ ವೇಳೆ ಬೆಂಗಳೂರಿನ ವೇ. ಬ್ರ.ಎಸ್. ಗಣೇಶ ಘನಪಾಠಿ, ವಿಜಯವಾಡದ ವೇ.ಬ್ರ. ಸುಂದರಾಮ ಶ್ರೌತಿ ಅವರನ್ನು ಶ್ರೀಗಳು ಸನ್ಮಾನಿಸಿದರು.