ಮಹನೀಯರ ಹೋರಾಟದ ಫಲ ಸಿಗುವಂತಾಗಲಿ

ಹುಣಸೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಸಮಾರಂಭದಲ್ಲಿ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಸೀಲ್ದಾರ್ ಮಂಜುನಾಥ್, ಡಿ.ಕೆ.ಕುನ್ನೇಗೌಡ, ಡಿ.ಕುಮಾರ್, ಡಾ.ಶರತ್‌ಕುಮಾರ್, ಸ್ವಾಮಿಗೌಡ ಇದ್ದರು.
ಹುಣಸೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಸಮಾರಂಭದಲ್ಲಿ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಸೀಲ್ದಾರ್ ಮಂಜುನಾಥ್, ಡಿ.ಕೆ.ಕುನ್ನೇಗೌಡ, ಡಿ.ಕುಮಾರ್, ಡಾ.ಶರತ್‌ಕುಮಾರ್, ಸ್ವಾಮಿಗೌಡ ಇದ್ದರು.
Published on

 ಹುಣಸೂರು: ಸಮಾಜದಲ್ಲಿ ಶೋಷಿತ ವರ್ಗಗಳು ಎದುರಿಸುತ್ತಿದ್ದ ಜಾತೀಯತೆ, ಅನಿಷ್ಠ ಪದ್ಧತಿಗಳಿಗೆ ಅಂತ್ಯ ಹಾಡುವಲ್ಲಿ ಹೋರಾಟ ನಡೆಸಿದ್ದ ಬಸವಣ್ಣ, ಕನಕದಾಸರು ಮತ್ತು ಅಂಬೇಡ್ಕರ್ ಕೊಡುಗೆ ಅಪಾರವಾಗಿದ್ದು, ಅವರ ಹೋರಾಟದ ಫಲ ಧಕ್ಕುವ ಕಾಲ ಶೀಘ್ರ ಬರಬೇಕಿದೆ ಎಂದು ಮೈಸೂರಿನ ಕಾಗಿನೆಲೆ ಶಿಕ್ಷಕ ಶಿಕ್ಷಣ ಕಾಲೇಜಿನ ಉಪನ್ಯಾಸಕ ಡಾ. ಶರತ್ ಕುಮಾರ್ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ 537ನೇ ಕನಕಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶತಮಾನಗಳಿಂದ ತಳವರ್ಗದವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿತ್ತು. ಅವುಗಳನ್ನು ವಿವಿಧ ಕಾಲಘಟ್ಟದಲ್ಲಿ ಮಹನೀಯರು ಧಿಕ್ಕರಿಸಿ ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು. ಈ ಸಾಲಿನಲ್ಲಿ ಮೊದಲಿಗರಾಗಿ ಬಸವಣ್ಣ, ಕನಕದಾಸ ಮತ್ತು ಈ ಶತಮಾನಕ್ಕೆ ಅಂಬೇಡ್ಕರ್ ಪ್ರಮುಖರಾಗಿದ್ದಾರೆ ಎಂದರು.

ಶೋಷಿತ ಸಮುದಾಯಕ್ಕೆ ದೇವಾಲಯಗಳು ಶಾಶ್ವತವಾಗಿ ಮುಚ್ಚಿದ್ದು, ಕನಕದಾಸರೂ ಇದರಿಂದ ಮುಕ್ತರಾಗಿರಲಿಲ್ಲ. ಇದಕ್ಕೆ ಜೀವಂತ ಉದಾಹರಣೆ ಉಡುಪಿಯ ಶ್ರೀ ಕೃಷ್ಣ ಮಠದ ಕನಕನ ಕಿಂಡಿ. ಕನಕದಾಸರು ಶೋಷಿತರು ಮತ್ತು ಧಮನಿತರ ದನಿಯಾಗಿ ನಾಡಿನ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ತಮ್ಮ ಕೀರ್ತನೆ ಮೂಲಕ ಜಾಗೃತಿ ಮೂಡಿಸಿದರು ಎಂದರು.

ಶತಮಾನಗಳಿಂದ ಬಸವಣ್ಣ ಮತ್ತು ಕನಕದಾಸರು ಸಮಾಜ ತಿದ್ದುವ ದಿಕ್ಕಿನಲ್ಲಿ ನಡೆಸಿದ ಜಾಗೃತಿ ಹೋರಾಟ ಇಂದು ಒಂದು ಹಂತಕ್ಕೆ ಬಂದಿದ್ದು, ಎಲ್ಲ ಸಮಾಜಗಳು ಒಗ್ಗೂಡುವ ಪರಿಸರ ನಿರ್ಮಾಣವಾಗಿದೆ. ಜಾತಿ ಸಂಘರ್ಷಗಳಿಗೆ ಕಡಿವಾಣ ಬಿದ್ದ ನಂತರದಲ್ಲಿ ಮನುಷ್ಯರು ನೆಮ್ಮದಿಯಿಂದ ಬಾಳ್ವೆ ನಡೆಸುವ ವಾತಾವರಣ ಸೃಷ್ಟಿಯಾಗಿದೆ ಎಂದರು.

ಶಾಸಕ ಜಿ.ಡಿ.ಹರೀಶ್ ಗೌಡ ಕಳುಹಿಸಿದ್ದ ಸಂದೇಶ ಪತ್ರವನ್ನು ತಹಸೀಲ್ದಾರ್ ಮಂಜುನಾಥ್ ಓದಿ ಶುಭ ಕೋರಿದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಡಿ.ಕುನ್ನೇಗೌಡ, ಮುಖಂಡರಾದ ಬಿ.ಎನ್.ಜಯರಾಂ, ಕಣಗಾಲ್ ರಾಮೇಗೌಡ, ಈಶ್ವರ್, ಗಣೇಶ್ ಕುಮಾರಸ್ವಾಮಿ, ನಿಂಗರಾಜ ಮಲ್ಲಾಡಿ, ಕಸಾಪ ಅಧ್ಯಕ್ಷ ಮಹದೇವ್, ದೇವರಾಜ ಒಡೆಯರ್, ಕಣಗಾಲ್ ಮಹೇಶ್, ಡಿ.ಕುಮಾರ್, ಉಪತಹಶೀಲ್ದಾರ್ ನರಸಿಂಹಯ್ಯ, ಅರುಣ್ ಕುಮಾರ್, ಶಿರಸ್ತೇದಾರ್ ಶ್ರೀಪಾದ್, ಎ.ಪಿ.ಸ್ವಾಮಿ, ಸ್ವಾಮಿಗೌಡ, ಅಶೋಕ್, ಮಂಡ್ಯ ಮಹೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net