

ರಬಕವಿ-ಬನಹಟ್ಟಿ: ಕಾಶ್ಮೀರದಲ್ಲಿ ಪ್ರವಾಸಿಗರು ಉಗ್ರರ ದಾಳಿಗೆ ಪ್ರಾಣ ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಹೇಯ ಕೃತ್ಯ ಖಂಡಿಸಿ ರಬಕವಿ ನಗರದ ವಿವಿಧ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಪಂಜಿನ ಮೆರವಣಿಗೆಯ ನಂತರ ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದು ಪರ ಸಂಘಟನೆ ಮುಖಂಡ ನಂದಕುಮಾರ ಗಾಯಕವಾಡ ಮಾತನಾಡಿ, ಉಗ್ರರ ದಾಳಿಗೆ ಪ್ರಾಣ ತೆತ್ತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ನಡೆಸಿದ ಈ ಪಂಜಿನ ಮೆರವಣಿಗೆ ಹಿಂದು ಸಮಾಜದ ಒಗ್ಗಟ್ಟಿನ ಪ್ರದರ್ಶನವಾಗಿದೆ. ಪಾಕಿಸ್ತಾನ ನೇರವಾಗಿ ಯುದ್ಧ ಮಾಡಲು ಧೈರ್ಯವಿಲ್ಲದೆ ಇಂತಹ ಹೇಯ ಕೃತ್ಯಗಳನ್ನು ನಡೆಸುತ್ತಿದೆ. ಭಯೋತ್ಪಾದನೆಯಿಂದ ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹುನ್ನಾರ ನಡೆಸುತ್ತಿದೆ. ಇದು ಎಂದಿಗೂ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು. ಕಾಶ್ಮೀರ ಕಣಿವೆಗಳಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳನ್ನು ನಿರ್ಮೂಲನೆ ಮಾಡಬೇಕು ಎಂದರು.
ಸ್ಥಳೀಯ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಂಕರಲಿಂಗ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ಪಾಕಿಸ್ತಾನ ವಿರುದ್ಧ ಘೋಷಣೆ ಮೊಳಗಿದವು.
ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಧರ್ಮಾಚಾರ ಪ್ರಮುಖರಾದ ವಿರುಪಾಕ್ಷಯ್ಯ ಮಠದ, ಸುನೀಲ ಸಿಕ್ಕಲಗಾರ, ಮಾರುತಿ ಗಾಡಿವಡ್ಡರ, ಮಹಾದೇವ ಜಾದವ, ಬಸವರಾಜ ಪೂಜಾರಿ, ಮಹಾದೇವ ಬಿಸನಾಳ, ಮಹಾದೇವ ಆಲಕನೂರ, ವಿಜಯ ಹತಪಕ್ಕಿ, ಯಲ್ಲಪ್ಪ ಕಟಗಿ, ಧರೆಪ್ಪ ಉಳ್ಳಾಗಡ್ಡಿ, ಹನಮಂತ ಹಿಪ್ಪರಗಿ, ಪಾಂಡು ಈರಣ್ಣವರ, ಸುಭಾಷ ಭಜಂತರಿ, ಗಣೇಶ ಸುಡಾಳ, ನಾಗಪ್ಪ ಹನಗಂಡಿ, ಮಹಾದೇವ ದೂಪದಾಳ, ದೀಪಕ ಗೋಟೆ, ಮಹಾಂತೇಶ ಖವಾಸಿ ಮತ್ತಿತರರಿದ್ದರು.